ಬೆಂಗಳೂರು, ಆ.31(Daijiworld News/SS): ಮುಂದಿನ ದಿನಗಳಲ್ಲಿ ಮದ್ಯ ಖರೀದಿಗೂ ಸಹಿತ ಆಧಾರ್ ಕಾರ್ಡ್'ನ್ನು ಕಡ್ಡಾಯಗೊಳಿಸುವ ಕುರಿತಾಗಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಮದ್ಯದ ಬಾಟಲ್ ನಿಂದಾಗಿ ಉಂಟಾಗುವ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಈ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ತಿಳಿದುಬಂದಿದೆ. ಮದ್ಯದ ಬಾಟಲಿ ಮತ್ತು ಟೆಟ್ರಾ ಪ್ಯಾಕ್'ಗಳಿಂದ ಉಂಟಾಗುತ್ತಿರುವ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಇಂತಹ ಹಕ್ಕೊತ್ತಾಯ ಬಲವಾಗಿದೆ. ಈಗಾಗಲೇ ಆಧಾರ್ ಕಡ್ಡಾಯ ಮಾಡುವ ವಿಚಾರವಾಗಿ ಅಭಿಪ್ರಾಯ ತಿಳಿಸಬೇಕೆಂದು ಅಬಕಾರಿ ಇಲಾಖೆ ಆಯುಕ್ತರಿಗೆ ಇಲಾಖೆ ಕಾರ್ಯದರ್ಶಿಗಳು ಪತ್ರ ಬರೆದಿರುವ ಮಾಹಿತಿ ಬೆಳಕಿಗೆ ಬಂದಿದೆ.
ಮದ್ಯದ ಬಾಟಲಿಯಿಂದಾಗಿ ಪರಿಸರದ ಮಾಲಿನ್ಯದ ಮೇಲೆ ಉಂಟಾಗುವ ಪರಿಣಾಮದ ಕುರಿತಾಗಿ ಮಂಗಳೂರು ಮೂಲದ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಈ ಮನವಿಯಲ್ಲಿ ಮದ್ಯ ಖರೀದಿಗೆ ಆಧಾರ್ ಕಾರ್ಡ್ ಹೊಂದಿರಬೇಕು ಎನ್ನುವುದು ಪ್ರಮುಖ ಸಲಹೆಗಳಲ್ಲಿ ಒಂದು ಎನ್ನಲಾಗಿದೆ.
ಸಾರ್ವಜನಿಕ ಸ್ಥಳಗಳು, ಪಾರ್ಕಿಂಗ್ ಪ್ರದೇಶ, ಕೆರೆ, ನದಿ, ನಿರ್ಜನ ಪ್ರದೇಶ, ಮೈದಾನ, ಉದ್ಯಾನವನ, ಜಲಮೂಲಗಳಲ್ಲಿ ಎಲ್ಲೆಂದರಲ್ಲಿ ಕುಡಿದು ಬೇಕಾಬಿಟ್ಟಿ ಈ ಟೆಟ್ರಾ ಪ್ಯಾಕ್'ಗಳು, ಮದ್ಯದ ಬಾಟಲಿಗಳನ್ನು ಬಿಸಾಡಲಾಗುತ್ತಿದೆ. ಇವು ಜಲಮೂಲಗಳನ್ನು ತಲುಪಿ ಪರಿಸರಕ್ಕೆ ಹಾಗೂ ಜನ, ಪ್ರಾಣಿಗಳಿಗೆ ಹಾನಿಯನ್ನುಂಟು ಮಾಡುತ್ತಿದೆ. ಜತೆಗೆ ಜಲಮೂಲಗಳನ್ನು ಕಲುಷಿತಗೊಳಿಸುತ್ತಿವೆ. ಹೀಗಾಗಿ ಇದನ್ನು ತಡೆಗಟ್ಟಲು ಆಧಾರ್ ಕಡ್ಡಾಯಗೊಳಿಸಬೇಕು. ಹೀಗೆ ಮಾಡಿದರೆ ಮದ್ಯ ಬಾಟಲು, ಟೆಟ್ರಾಪ್ಯಾಕ್ ಖರೀದಿದಾರನನ್ನು ಜವಾಬ್ದಾರರನ್ನಾಗಿ ಮಾಡಬಹುದು ಎಂಬ ಸಲಹೆ ಮನವಿಯಲ್ಲಿದೆ.