ಪಶ್ಚಿಮ ಬಂಗಾಳ,ಸೆ 1 (Daijiworld News/RD): ವಿಜಯದಶಮಿಯ ದಿನದಂದು ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾ ಬರುತ್ತಿದ್ದು, ಈ ಬಾರಿಯೂ ಇದರ ಸಂಭ್ರಮವನ್ನು ಇಮ್ಮಡಿಗೊಳಿಸುವ ಸಲುವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 70 ಕೋಟಿ ರೂ ಕಾಣಿಕೆಯಾಗಿ ನೀಡಲಾಗುವುದು ಎಂದು ಹೇಳಿದ್ದಾರೆ.
''ನಮ್ಮದು ಬಡವರ ಸರಕಾರ. ಆದರೂ ದುರ್ಗಾ ಪೂಜಾ ಸಮಿತಿಗಳಿಗೆ ನಮ್ಮಿಂದಾದ ಎಲ್ಲ ಸಹಕಾರ ನೀಡಲು ಪ್ರಯತ್ನಿಸುತ್ತೇವೆ. ಕಳೆದ ಬಾರಿ ಕೊಟ್ಟಿದ್ದ 15000 ರೂ. ಧನಸಹಾಯವನ್ನು 25 ಸಾವಿರ ರೂ.ಗಳಿಗೆ ಏರಿಸಿದ್ದೇವೆ. ದುರ್ಗಾ ಪೂಜಾ ಸಮಿತಿಗಳ ಪರಿಸ್ಥಿತಿಯೂ ಚೆನ್ನಾಗಿಲ್ಲ ಎನ್ನುವುದು ನಮಗೆ ಗೊತ್ತು. ಈ ನಡುವೆ ವಿದ್ಯುತ್ ದರವನ್ನೂ ಹೆಚ್ಚಿಸಲಾಗಿದೆ. ಹಾಗಾಗಿ, ವಿದ್ಯುತ್ ದರದಲ್ಲಿ ಶೇಕಡಾ 25ರಷ್ಟು ಕಡಿತ ಮಾಡುತ್ತೇವೆ'' ಎಂದರು.
ಕೋಲ್ಕತ್ತಾ ನಗರದಲ್ಲೇ 3000ಕ್ಕೂ ಅಧಿಕ ಪೆಂಡಾಲ್ಗಳನ್ನು ಪೂಜೆಗೆ ಸ್ಥಾಪಿಸಲಾಗುತ್ತದೆ. ಜೊತೆಗೆ ರಾಜ್ಯದ ಇತರ ಭಾಗಗಳಲ್ಲಿ 25000 ಸೇರಿ 28,000 ಪೆಂಡಾಲ್ಗಳಿರುತ್ತವೆ. ಈ ಪ್ರತಿಯೊಂದು ಪೆಂಡಾಲ್ಗಳಿಗೆ ಸರಕಾರದ ವತಿಯಿಂದ ತಲಾ 25000 ರೂ. ನೀಡುವುದಾಗಿ ಸರಕಾರ ಪ್ರಕಟಿಸಿದೆ. ಕಳೆದ ವರ್ಷ ಈ ಪೆಂಡಾಲ್ ಗಳಿಗೆ ಸರಕಾರ 15 ಸಾವಿರ ರೂ. ನೀಡಿತ್ತು.
ಈಗಾಗಲೆ ಪಶ್ಚಿಮ ಬಂಗಾಳ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದು, ಈ ನಡುವೆ ದುರ್ಗಾ ಪೂಜೆಗೆ 70 ಕೋಟಿ ರೂ. ಕಾಣಿಕೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ. ಕಳೆದ ಬಾರಿ 28 ಕೋಟಿ ರೂ ನ್ನು ಈ ಸರ್ಕಾರ ನೀಡಿತ್ತು.