ನವದೆಹಲಿ,ಸೆ 1 (Daijiworld News/RD): ಡಿಜಿಟಲ್ ಪಾವತಿ ಉತ್ತೇಜಿಸುವ ಸಲುವಾಗಿ ರೈಲ್ವೆ ಇಲಾಖೆಯು ಆನ್ಲೈನ್ ನಲ್ಲಿ ರೈಲು ಟಿಕೆಟ್ ಬುಕ್ಕಿಂಗ್ ಉತ್ತೇಜಿಸಿ, ಸೇವಾ ದರವನ್ನು ಹಿಂಪಡೆದಿತ್ತು. ಆದರೆ ಇದೀಗ ಸೇವಾ ದರವನ್ನು ಮತ್ತೆ ಜಾರಿಗೊಳಿಸಿದ್ದು ಐಆರ್ಸಿಟಿಸಿ ರೈಲ್ವೇ ಆನ್ಲೈನ್ ಟಿಕೆಟ್ ಬುಕ್ಕಿಂಗ್ ನ ದರವನ್ನು ಮತ್ತೊಮ್ಮೆ ದುಬಾರಿಗೊಳಿಸಿದೆ.
2016ರಲ್ಲಿ ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿದ ಬಳಿಕ ರೈಲ್ವೆ ಇಲಾಖೆ ಬುಕ್ಕಿಂಗ್ನಲ್ಲಿನ ಸೇವಾ ದರವನ್ನು ಹಿಂಪಡೆದಿತ್ತು. ಬಳಿಕ ಡಿಜಿಟಲ್ ಪಾವತಿ ಉತ್ತೇಜಿಸುವ ಸಲುವಾಗಿ ರೈಲ್ವೆ ಇಲಾಖೆ ಆನ್ಲೈನ್ ರೈಲು ಟಿಕೆಟ್ ಬುಕ್ಕಿಂಗ್ ಮಾಡುವ ಅವಕಾಶ ನೀಡಿತ್ತು.
ಐಆರ್ ಸಿಟಿಸಿ ನಿನ್ನೆ ಹೊರಡಿಸಿರುವ ಪ್ರಕಟಣೆಯಂತೆ, ಇನ್ನು ಮುಂದೆ ಪ್ರತಿ ಟಿಕೆಟಿಗೂ ಜಿ ಎಸ್ ಟಿ ಅನ್ವಯವಾಗಲಿದ್ದು, ಈ ಮೊದಲು ಸೇವಾದರಗಳು ರೂ. 20 (ಎಸಿಯೇತರ) ಹಾಗೂ ರೂ. 40 (ಎಸಿ) ಇತ್ತು. ಅದನ್ನೀಗ ರೂ. 15, ರೂ. 30ರೂ.ಗಳಿಗೆ ನಿಗದಿಪಡಿಸಲಾಗಿದೆ. ನೋಟ್ ಬ್ಯಾನ್ ಬಳಿಕ ಸೇವಾ ದರವನ್ನು ಹಿಂಪಡೆದಿದ್ದ ರೈಲ್ವೆ ಇಲಾಖೆ ಕೊಂಚ ನಷ್ಟವನ್ನು ಅನುಭವಿಸಿತ್ತು. ಈ ನಷ್ಟವನ್ನು ಭರಿಸುವುದಕ್ಕೆ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ರೈಲ್ವೆ ಇಲಾಖೆಗೆ ತಿಳಿಸಿದೆ.