ಬೆಂಗಳೂರು,ಸೆ 1 (Daijiworld News/RD): ಜೆಡಿಎಸ್ ಟೀಕಿಸುವ ಭರದಲ್ಲಿ, ಕುಣಿಯಲು ಬಾರದ ವೇಶ್ಯೆ ನೆಲ ಡೊಂಕು ಎಂದಿದ್ದಳಂತೆ ಹಂಗೆ ಜೆಡಿಎಸ್ ಲೆಕ್ಕ ಎಂದು ವಿವಾದಾತ್ಮಕ ಗಾದೆಯನ್ನು ಸಿದ್ದರಾಮಯ್ಯ ಹೇಳಿದ್ದರು, ಇದೀಗ ಈ ಹೇಳಿಕೆ ರಾಜಕೀಯ ಮಟ್ಟದಲ್ಲಿ ಭಾರೀ ಸುದ್ದಿಯಾಗಿದ್ದು, ಈ ಹೇಳಿಕೆಗೆ ಟ್ವೀಟ್ ಮಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ಟ್ವೀಟ್ ಮಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್, “ವಿಧಾನಸಭೆಯಲ್ಲಿ ಶಾಸಕರಿಗೆ ಅವಕಾಶ ಸಿಕ್ಕಾಗಲೆಲ್ಲಾ ಸಂಧಿ, ಸಮಾಸ ಹೇಳಿಕೊಡುವ ಮೇಷ್ಟ್ರಿಗೆ ಯಾವ ಗಾದೆಯನ್ನು, ಯಾವ ಸಂದರ್ಭದಲ್ಲಿ, ಯಾರನ್ನುದ್ದೇಶಿಸಿ ಹೇಳಬೇಕೆಂಬ ವಿವೇಚನೆ ಇಲ್ಲದಿರುವುದು ವಿಪರ್ಯಾಸ” ಎಂದು ಕಿಡಿ ಕಾರಿದ್ದಾರೆ.
ಸಿದ್ದರಾಮಯ್ಯ ಅವರು ವೇಶ್ಯೆ ಹೋಲಿಕೆ ಮಾಡಿ, ಮಹಿಳೆಯರ ಕುರಿತು ಅಪಮಾನದ ಹೇಳಿಕೆ ನೀಡುವುದು ತಪ್ಪು. ಯಾವುದಕ್ಕೋ ಹೋಲಿಕೆ ಮಾಡುವುದು ಸರಿಯಲ್ಲ. ಅವರ ಈ ಹೇಳಿಕೆಯಿಂದ ಮಹಿಳಾ ಸಮಾಜಕ್ಕೆ ಅನ್ಯಾಯ ಎಂದು ಆರ್.ಅಶೋಕ್ ಖಂಡಿಸಿದ್ದರು.
ಈ ಕುರಿತು ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿ, ಇದು ನಮ್ಮ ಕಡೆ ಆಡುಭಾಷೆಯಲ್ಲಿ ಹೇಳುವ ಗಾದೆ ಮಾತು. ನಾನು ಜೆಡಿಎಸ್ಗೆ ಹೇಳಿದ್ದಲ್ಲ, ಬಿಜೆಪಿಗೆ ಹೇಳಿದ್ದು. ಇದೀಗ ಬಿಜೆಪಿಯವರ ಆಡಳಿತ ವೈಖರಿ ಕುರಿತು ಹೇಳಿದ್ದು ಎಂದು ಸ್ಪಷ್ಟನೆ ನೀಡಿದ್ದರು.