ಕಲಬುರಗಿ, ಜೂ. 12 (DaijiworldNews/TA): ನಗರದ ಸರ್ಧಾರ್ ವಲ್ಲಭಭಾಯಿ ಪಟೇಲ್ (ಎಸ್ವಿಪಿ) ವೃತ್ತದಲ್ಲಿರುವ ಬಾರ್ & ರೆಸ್ಟೋರೆಂಟ್ ಒಂದರ ಕಟ್ಟಡದಲ್ಲಿ ಶುಕ್ರವಾರ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಬಾರ್ನ ಮೇಲಂತಸ್ತಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಜ್ವಾಲೆಗಳು ವ್ಯಾಪಿಸಿ ಕಟ್ಟಡದ ಮೇಲ್ಭಾಗ ಧಗಧಗನೆ ಹೊತ್ತಿ ಉರಿಯಿತು. ಬೆಂಕಿಯ ಕೆನ್ನಾಲಿಗೆ ಮತ್ತು ಹೊಗೆ ದೂರದಿಂದಲೇ ಗೋಚರವಾಗಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಸಿತು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಎರಡು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದವು. ಸಿಬ್ಬಂದಿ ತ್ವರಿತವಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಬೆಂಕಿ ಅಕ್ಕಪಕ್ಕದ ಕಟ್ಟಡಗಳಿಗೆ ವ್ಯಾಪಿಸದಂತೆ ತಡೆಗಟ್ಟಿದರು.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ನಿಖರ ಕಾರಣ ಪತ್ತೆಗಾಗಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.