ಬೆಂಗಳೂರು, ಜೂ. 12 (DaijiworldNews/TA): ನಿಮ್ಮ ಪ್ರದೇಶದಲ್ಲಿರುವ ಬೀದಿ ನಾಯಿಗಳ ಕಾಟದಿಂದ ಬೇಸತ್ತು ಅವುಗಳನ್ನು ಹಿಡಿದು ಬೇರೆಡೆ ಬಿಡುವ ಯೋಚನೆ ಮಾಡುತ್ತಿದ್ದೀರಾ? ಅಥವಾ ನಾಯಿಗಳಿಗೆ ಆಹಾರ ನೀಡುವವರೊಂದಿಗೆ ವಾಗ್ವಾದ ನಡೆಸುತ್ತಿದ್ದೀರಾ? ಹಾಗಿದ್ದರೆ ಈ ಮಾಹಿತಿ ತಿಳಿದುಕೊಳ್ಳುವುದು ಅಗತ್ಯ. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬೀದಿ ನಾಯಿಗಳ ನಿರ್ವಹಣೆ ಕುರಿತು ಹೊಸ ನಿಯಮಗಳನ್ನು ಜಾರಿಗೊಳಿಸಿದ್ದು, ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಜೂನ್ 11ರಂದು ಪ್ರಕಟವಾದ ಅಧಿಕೃತ ಆದೇಶದ ಪ್ರಕಾರ, ಬೀದಿ ನಾಯಿಗಳ ಕಲ್ಯಾಣ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಮಹತ್ವದ ನಿಯಮಗಳನ್ನು ಜಾರಿಗೆ ತರಲಾಗಿದೆ.
ಎಲ್ಲೆಂದರಲ್ಲಿ ಆಹಾರ ನೀಡುವಂತಿಲ್ಲ : ಬೀದಿ ನಾಯಿಗಳಿಗೆ ಆಹಾರ ನೀಡುವುದನ್ನು ನಿಷೇಧಿಸಲಾಗಿಲ್ಲ. ಆದರೆ ಇನ್ನುಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಎಲ್ಲೆಂದರಲ್ಲಿ ಬಿಸ್ಕೆಟ್ ಹಾಗೂ ಆಹಾರ ಹಾಕಲು ಅವಕಾಶ ಇರುವುದಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಗುರುತಿಸಿರುವ ನಿಗದಿತ ಫೀಡಿಂಗ್ ಸ್ಪಾಟ್ಗಳಲ್ಲಿ ಮಾತ್ರ ನಾಯಿಗಳಿಗೆ ಆಹಾರ ನೀಡಬೇಕು. ನಗರದ ವಿವಿಧ ಭಾಗಗಳಲ್ಲಿ ನಾಯಿಗಳ ಸಂಖ್ಯೆಯನ್ನು ಆಧರಿಸಿ ಹೊಸ ಫೀಡಿಂಗ್ ಸ್ಪಾಟ್ಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.
ನಾಯಿಗಳನ್ನು ಸ್ಥಳಾಂತರಿಸಿದರೆ ಕಾನೂನು ಕ್ರಮ: ಯಾವುದೇ ವ್ಯಕ್ತಿ, ಸಂಘಟನೆ ಅಥವಾ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ಗಳು (RWA) ಸ್ವಯಂಪ್ರೇರಿತವಾಗಿ ಬೀದಿ ನಾಯಿಗಳನ್ನು ಹಿಡಿದು ಬೇರೆ ಪ್ರದೇಶಗಳಿಗೆ ಸಾಗಿಸುವಂತಿಲ್ಲ. ಇದು ಕಾನೂನುಬಾಹಿರ ಕ್ರಮವಾಗಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಬಹುದು ಎಂದು ಪ್ರಾಧಿಕಾರ ಎಚ್ಚರಿಸಿದೆ.
ಸ್ಥಳಾಂತರ ಮಾಡುವ ಅಧಿಕಾರ ಯಾರಿಗೆ?: ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ, ಕೇವಲ ಸಂಬಂಧಿತ ಸ್ಥಳೀಯ ಸಂಸ್ಥೆಗಳ ನಿಯೋಜಿತ ಅಧಿಕಾರಿಗಳು ಮಾತ್ರ ಬೀದಿ ನಾಯಿಗಳನ್ನು ಹಿಡಿದು ಅಧಿಕೃತ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲು ಅಧಿಕಾರ ಹೊಂದಿರುತ್ತಾರೆ.
ನಾಯಿಗಳಿಗೆ ಹಿಂಸೆ ನೀಡಿದರೆ ಶಿಕ್ಷೆ : ಬೀದಿ ನಾಯಿಗಳಿಗೆ ಕಲ್ಲು ತೂರುವುದು, ಹೊಡೆಯುವುದು, ಹಿಂಸೆ ನೀಡುವುದು ಅಥವಾ ಕಿರುಕುಳ ನೀಡುವುದು ಕೂಡ ಕಾನೂನುಬಾಹಿರವಾಗಿದೆ. ಇಂತಹ ಘಟನೆಗಳಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೀಡಿಂಗ್ ಸ್ಪಾಟ್ ಬೇಕಿದ್ದರೆ ಏನು ಮಾಡಬೇಕು? : ನಿಮ್ಮ ಬಡಾವಣೆ ಅಥವಾ ಪ್ರದೇಶದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಲು ಅಧಿಕೃತ ಸ್ಥಳದ ಅಗತ್ಯವಿದ್ದರೆ, ನಾಗರಿಕರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಹಾಯವಾಣಿ 1533ಕ್ಕೆ ಕರೆ ಮಾಡಿ ಮನವಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಇಲಾಖೆಯ ಅಧಿಕಾರಿಗಳನ್ನು ಕೂಡ ಸಂಪರ್ಕಿಸಬಹುದಾಗಿದೆ.
ಸಾಮರಸ್ಯ ಕಾಪಾಡಲು ಮನವಿ : ಬೀದಿ ನಾಯಿಗಳ ವಿಚಾರವಾಗಿ ಪ್ರಾಣಿ ದಯಾ ಸಂಘಟನೆಗಳು, ನಿವಾಸಿಗಳು ಹಾಗೂ ಆರ್ಡಬ್ಲ್ಯುಎಗಳ ನಡುವೆ ಅನಗತ್ಯ ಸಂಘರ್ಷಗಳು ನಡೆಯದಂತೆ ಪರಸ್ಪರ ಸಹಕಾರ ಮತ್ತು ಗೌರವದಿಂದ ವರ್ತಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಮನವಿ ಮಾಡಿದ್ದಾರೆ.
ಇದೇ ವೇಳೆ, ಈ ಹೊಸ ನಿಯಮಗಳನ್ನು ನಟಿ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೋಹಕ ತಾರೆ ರಮ್ಯಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡು ಬೆಂಗಳೂರು ಪ್ರಾಧಿಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಬೀದಿ ನಾಯಿಗಳ ರಕ್ಷಣೆಗೆ ಸಂಬಂಧಿಸಿದಂತೆ ಅವರು ಈ ಹಿಂದೆ ಹಲವು ಅಭಿಯಾನಗಳು ಮತ್ತು ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.