ನವದೆಹಲಿ, ಜೂ. 12 (DaijiworldNews/TA): ಕಳೆದ ಕೆಲವು ವಾರಗಳಿಂದ ಡಾಲರ್ ಎದುರು ಒತ್ತಡದಲ್ಲಿದ್ದ ಭಾರತೀಯ ರೂಪಾಯಿ ಶುಕ್ರವಾರದ ವಹಿವಾಟಿನಲ್ಲಿ ಭಾರೀ ಚೇತರಿಕೆ ಕಂಡಿದೆ. ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ 67 ಪೈಸೆ ಏರಿಕೆಯಾಗಿದ್ದು, 95.18 ರೂ. ಮಟ್ಟದಲ್ಲಿ ವಹಿವಾಟು ನಡೆಸಿದೆ. ಇತ್ತೀಚಿನ ದಿನಗಳಲ್ಲಿ 100 ರೂಪಾಯಿ ಗಡಿ ಸಮೀಪಿಸುವ ಆತಂಕದ ನಡುವೆಯೇ ರೂಪಾಯಿ ಬಲಿಷ್ಠ ಪ್ರದರ್ಶನ ನೀಡಿರುವುದು ಹೂಡಿಕೆದಾರರಲ್ಲಿ ಆಶಾವಾದ ಮೂಡಿಸಿದೆ.

ಮೇ ತಿಂಗಳ ಮೂರನೇ ವಾರದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 96.57 ಮಟ್ಟಕ್ಕೆ ಕುಸಿದಿತ್ತು. ಆದರೆ ಅಲ್ಲಿಂದೀಚೆಗೆ ಭಾರತೀಯ ಕರೆನ್ಸಿ ಸುಮಾರು 1.39 ರೂಪಾಯಿಗಳಷ್ಟು ಚೇತರಿಕೆ ಕಂಡಿದೆ. ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆ ಶಾಂತಿ ಒಪ್ಪಂದ ಸಾಧ್ಯತೆಯ ಬಗ್ಗೆ ನೀಡಿದ ಸೂಚನೆಯ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಕಳೆದ ಎರಡು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಇದು ಭಾರತದಂತಹ ತೈಲ ಆಮದು ದೇಶಗಳಿಗೆ ದೊಡ್ಡ ನಿರಾಳತೆ ತಂದಿದೆ.
ಭಾರತ ತನ್ನ ತೈಲ ಅಗತ್ಯದ ಬಹುಪಾಲನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ತೈಲದ ಬೆಲೆ ಇಳಿದಾಗ ಡಾಲರ್ನಲ್ಲಿ ಪಾವತಿಸಬೇಕಾದ ಮೊತ್ತವೂ ಕಡಿಮೆಯಾಗುತ್ತದೆ. ಇದರಿಂದ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಗೆ ಬೇಡಿಕೆ ಹೆಚ್ಚಾಗಿ, ಅದರ ಮೌಲ್ಯ ಬಲಗೊಳ್ಳುತ್ತದೆ.
ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ತಗ್ಗುವ ನಿರೀಕ್ಷೆಯಿಂದ ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ವಾತಾವರಣ ನಿರ್ಮಾಣವಾಗಿದೆ. ಜೊತೆಗೆ ಯುಎಸ್ ಟ್ರೆಜರಿ ಯೀಲ್ಡ್ ಹಾಗೂ ಡಾಲರ್ ಸೂಚ್ಯಂಕದಲ್ಲಿ ಕಂಡುಬಂದ ಸಣ್ಣ ಪ್ರಮಾಣದ ಕುಸಿತವೂ ರೂಪಾಯಿ ಏರಿಕೆಗೆ ನೆರವಾಗಿದೆ.
ಪಶ್ಚಿಮ ಏಷ್ಯಾದ ಉದ್ವಿಗ್ನತೆಯಿಂದಾಗಿ ಗುರುವಾರ ರೂಪಾಯಿ ಮೌಲ್ಯ 60 ಪೈಸೆ ಕುಸಿದು 95.85 ರೂ.ನಲ್ಲಿ ವಹಿವಾಟು ಮುಗಿಸಿತ್ತು. ಆದರೆ ಶುಕ್ರವಾರ ಮಾರುಕಟ್ಟೆ ಆರಂಭದಲ್ಲೇ 95.40 ರೂ. ಮಟ್ಟದಲ್ಲಿ ವಹಿವಾಟು ಆರಂಭಿಸಿದ ರೂಪಾಯಿ, ಬಳಿಕ ಮತ್ತಷ್ಟು ಬಲಗೊಂಡು 95.18 ರೂ. ಗರಿಷ್ಠ ಮಟ್ಟ ತಲುಪಿದೆ.
ಇರಾನ್ ಮತ್ತು ಅಮೆರಿಕ ನಡುವಿನ ಒಪ್ಪಂದದ ಕುರಿತು ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಹೀಗಾಗಿ ಜಾಗತಿಕ ಹೂಡಿಕೆದಾರರು ಎಚ್ಚರಿಕೆಯ ನಿಲುವು ಮುಂದುವರಿಸಿದ್ದು, ಮುಂದಿನ ದಿನಗಳಲ್ಲಿ ಜಾಗತಿಕ ಬೆಳವಣಿಗೆಗಳು ರೂಪಾಯಿ ಚಲನವಲನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.