ಬೆಂಗಳೂರು, ಜೂ. 12 (DaijiworldNews/AK): ಗ್ಯಾರಂಟಿಗಳ ವಿಚಾರದಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಅದೇ ಗ್ಯಾರಂಟಿಗಳನ್ನು ಪರಿಷ್ಕರಣೆ ನೆಪದಲ್ಲಿ ಬಂದ್ ಮಾಡಲು ಹುನ್ನಾರ ನಡೆಸಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಆರೋಪಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಕೊಡಿ ಎಂದು ರಾಜ್ಯದ ಜನರು ಸರ್ಕಾರಕ್ಕೆ ಕೇಳಿರಲಿಲ್ಲ. ಅವರೇ ಸ್ವಾರ್ಥಕ್ಕಾಗಿ ಘೋಷಣೆ ಮಾಡಿದರು. ಫ್ರೀ ಬಸ್ ಕೊಡಿ ಎಂದು ಹೆಣ್ಣು ಮಕ್ಕಳು ಕೇಳಿರಲಿಲ್ಲ. ಆದರೂ ಸರ್ಕಾರವೇ ಕೊಟ್ಟು ಈಗ ಗ್ಯಾರಂಟಿಗಳನ್ನು ಸ್ಥಗಿತಗೊಳಿಸಲು ಮುಂದಾಗಿದ್ದಾರೆ ಎಂದು ಹೇಳಿದರು.
ಗೃಹಲಕ್ಷ್ಮಿ ಹಣ ಮೃತ ಫಲಾನುಭವಿಗಳ ಖಾತೆಗೆ ಹೋಗುತ್ತಿದೆ ಎಂಬ ವರದಿಗಳಿವೆ. ಸರ್ಕಾರದಲ್ಲಿ ಗ್ಯಾರಂಟಿ ಸಂಬಂಧ ಗೊಂದಲ ಇದೆ. ಎಲ್ಲಾ ಕಡೆ ಲೋಪ ಆಗಿದೆ. ಗ್ಯಾರಂಟಿಗಳು ಕಾಕಾ ಪಾಟೀಲ್ಗೆ ಫ್ರೀ, ಸಿದ್ದರಾಮಯ್ಯಗೆ ಫ್ರೀ ಎಂದು ಹೇಳಿದ್ದರು. ಈಗ ಸರಿಯಾಗಿ ಜಾರಿ ಮಾಡದೆ ನಿಲ್ಲಿಸಲು ಮುಂದಾಗಿದ್ದಾರೆ. ಆದ್ದರಿಂದ ಸರ್ಕಾರ ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಚುನಾವಣೆ ಬಂತು. ಅದರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಎಲೆಕ್ಷನ್ಗೆ ಗ್ಯಾರಂಟಿ ಕೊಡಬೇಕಿತ್ತು, ಕೊಟ್ಟರು. ಈಗ ನಿಲ್ಲಿಸುವ ಷಡ್ಯಂತ್ರ ಮಾಡುತ್ತಿದ್ದಾರೆ. ಗೃಹ ಲಕ್ಷ್ಮಿ ಹಣದಲ್ಲಿ ಅಕ್ರಮ ನಡೆದಿದೆ ಎಂದು ಸದನದಲ್ಲೇ ಒಪ್ಪಿಕೊಂಡಿದ್ದರು. ಅಧಿಕಾರಕ್ಕಾಗಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ನಡುವೆ ಶೀತಲ ಸಮರ ನಡೆಯುತ್ತಿತ್ತು. ಈಗ ಶಿವಕುಮಾರ್ ಅವರು ಸಿಎಂ ಆದ ನಂತರ ಸಚಿವ ಸಂಪುಟಕ್ಕಾಗಿ ಕಚ್ಚಾಟ ಆರಂಭವಾಯಿತು. ಬೆಂಗಳೂರು ಅಭಿವೃದ್ಧಿ ಖಾತೆಗೆ ಕೃಷ್ಣ ಭೈರೇಗೌಡ ಕ್ಯಾತೆ ತೆಗೆದಿದ್ದಾರೆ ಎಂದರು.
ರಾಮಲಿಂಗಾ ರೆಡ್ಡಿ ಅವರು ಖಾತೆ ಬೇಡ ಅಂತ ರಾಜೀನಾಮೆ ನೀಡಿದ್ದರು. ಕೆ.ಎಚ್.ಮುನಿಯಪ್ಪ ಅವರೂ ಖಾತೆಗೆ ಅಸಮಾಧಾನಗೊಂಡಿದ್ದರು. ಎಲ್ಲಕ್ಕೂ ರಾಹುಲ್ ಗಾಂಧಿ ಅವರ ಮೇಲೆಯೇ ಸರ್ಕಾರ ನಿಂತಿದೆ. ಶಿವಕುಮಾರ್ ಅವರು ಮುಖ್ಯಮಂತ್ರಿಗಳಾದ ಮೇಲೆ ಯಾವುದೂ ಸರಿ ಇಲ್ಲ ಎಂಬುದು ರಾಜ್ಯದ ಜನರಿಗೆ ತಿಳಿದಿದೆ ಎಂದು ಹೇಳಿದರು.
ಧರ್ಮಸ್ಥಳದ ಷಡ್ಯಂತ್ರ
ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಎಂದು ಆಗ ಉಪ ಮುಖ್ಯಮಂತ್ರಿಗಳಾಗಿದ್ದ ಡಿ ಕೆ ಶಿವಕುಮಾರ್ ಅವರೇ ಹೇಳಿದ್ದರು. ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ಮಾಡಿದ್ದೆವು. ಈಗ ಹೊಸದಾಗಿ ನಟ ಪ್ರಕಾಶ್ ರಾಜ್ ರೈ ಅವರ ಹೆಸರು ಕೇಳಿಬರುತ್ತಿದೆ. ಹಿಂದೂ ಧಾರ್ಮಿಕ ಸ್ಥಳಕ್ಕೆ ತೊಂದರೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.
ಮುಖ್ಯಮಂತ್ರಿ ಸೇಬು ಕಚ್ಚಿ ಎಸೆಯುವುದು
ಶಿವಕುಮಾರ್ ಅವರು ಮುಖ್ಯಮಂತ್ರಿಗಳಾದ ನಂತರ ಕನಕಪುರದಲ್ಲಿ ನಡೆದ ಸಮರ್ಪಣಾ ಯಾತ್ರೆಯಲ್ಲಿ ಕಚ್ಚಿದ ಸೇಬನ್ನು ಜನರ ಕಡೆಗೆ ಎಸೆದಿದ್ದರು. ಇದರ ಅರ್ಥ ನಾನು ತಿಂದ ನಂತರ ಉಳಿದ ಭಾಗವನ್ನು ನಾಡಿನ ಜನರು ತಿನ್ನಬೇಕು ಎಂಬುದಾಗಿದೆ. ಇದೇ ಸಂದೇಶವನ್ನು ಅವರು ಹೊರಹಾಕಿದ್ದಾರೆ ಎಂದರು.