ವಿಜಯಪುರ,ಸೆ 2 (Daijiworld News/RD): ಶರಣ ಸೂಫಿ ಸಂತರ ನಾಡಾದ ವಿಜಯಪುರ ಜಿಲ್ಲೆಯ ಮಸೀದಿಯೊಂದರ ಉದ್ಘಾಟನೆಯು ಲಕ್ಷ್ಮೀ ದೇವಿಯ ಪ್ರತಿಷ್ಠಾಪನೆಯೊಂದಿಗೆ ನೆರೆವೇರುವ ಮೂಲಕ ಸಮಾಜಕ್ಕೆ ಸಾಮರಸ್ಯ ಸಂದೇಶವನ್ನು ಸಾರಿದ್ದಾರೆ.
ಬಬಲೇಶ್ವರದ ಯಕ್ಕುಂಡಿಯಲ್ಲಿ, ಮೊಹರಂ ಮಸೀದಿ ಎಂದು ಕರೆಯಲಾಗುವ ಲಾಲಸಾಬ ಮಸೀದಿಯನ್ನು ಕಟ್ಟಲಾಗಿದ್ದು, ಇದರ ಉದ್ಘಾಟನೆ ನಿಮಿತ್ತ ತೆಂಗಿನ ಗರಿ, ಬಾಳೆದಿಂಡು, ಹಣ್ಣು ಹಂಪಲು ಸೇರಿ ವಿವಿಧ ಪೂಜ ಸಾಮಾಗ್ರಿಗಳೊಂದಿಗೆ ಲಕ್ಷ್ಮೀ ದೇವಿ ಪೋಟೋ ಪ್ರತಿಷ್ಠಾಪಿಸಿ ಗ್ರಾಮಸ್ಥರು ವಿಶೆಷ ಪೂಜೆ ನೆರವೇರಿಸಿದರು.
ಪೂಜೆ ನೆರವೇರಿದ ಬಳಿಕ ಮೂತ್ತೈದೆಯರಿಗೆ ಉಡಿ ತುಂಬಿ, ಆರತಿ ಬೆಳಗಿದ್ದಲ್ಲದೆ ಮಧ್ಯಾಹ್ನ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಬಳಿಕ ರಾತ್ರಿ ಭಾಗ್ಯವಂತಿ ಮಹಾತ್ಮೆ ನಾಟಕ ಪ್ರದರ್ಶನವನ್ನು ಹಮ್ಮಿಕೊಂಡಿದ್ದರು. ಈ ರೀತಿಯಾಗಿ ಜಾತಿ ಮತಗಳ ಬೇಧವಿಲ್ಲದೆ ಸಾಮರಸ್ಯವನ್ನು ಸಾರಿ ಸಮಾಜಕ್ಕೆ ಉತ್ತಮ ಉದಾಹಣೆಯನ್ನು ನೀಡಿದ್ದಾರೆ.