ತಮಿಳುನಾಡು, ಜೂ. 13 (DaijiworldNews/AA): ಪರಿಶ್ರಮ, ದೃಢನಿರ್ಧಾರ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದನ್ನು ಬೇಕಾದರು ಸಾಧಿಸಬಹುದು ಎಂಬುದಕ್ಕೆ ಐಎಎಸ್ ಅಧಿಕಾರಿ ಸರಣ್ಯ ಎಸ್ ಅವರೇ ಸಾಕ್ಷಿಯಾಗಿದ್ದಾರೆ.

ಕೃಷಿ ಕುಟುಂಬದ ಹಿನ್ನೆಲೆಯನ್ನು ಹೊಂದಿರುವ ಸರಣ್ಯ ಅವರು ತಮಿಳುನಾಡಿನ ಕಡಲೂರು ಮೂಲದವರು. ಸರಣ್ಯ ಅವರು 2016 ರಿಂದ 2020 ರವರೆಗೆ ಕುಮಾರಗುರು ಕೃಷಿ ಸಂಸ್ಥೆಯಲ್ಲಿ ಬಿಎಸ್ಸಿ ಕೃಷಿ ಪದವಿಯನ್ನು ಪೂರ್ಣಗೊಳಿಸಿದರು.
ಯುಪಿಎಸ್ಸಿ ಪರೀಕ್ಷೆ ಬರೆಯುವ ಕನಸು ಹೊಂದಿದ್ದ ಸರಣ್ಯ ಅವರು ಅಕಾಡೆಮಿಯೊಂದಕ್ಕೆ ಸೇರಿಕೊಂಡು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಯ ಹಂತಗಳಿಗೆ ಸೂಕ್ತ ಮಾರ್ಗದರ್ಶನ ಪಡೆದರು. ಅವರು ಯುಪಿಎಸ್ಸಿ ಪರೀಕ್ಷೆಗೆ ಕೃಷಿ ವಿಷಯವನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡಿದ್ದರು.
ಪರೀಕ್ಷೆಗೆ ತಯಾರಿ ನಡೆಸಿದ ಅವರು ತಮ್ಮ ಮೊದಲ ಎರಡು ಪ್ರಯತ್ನಗಳಲ್ಲಿ ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗಲು ವಿಫಲರಾಗುತ್ತಾರೆ. 2024ರಲ್ಲಿ ಮೂರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 125ನೇ ಅಖಿಲ ಭಾರತ ರ್ಯಾಂಕ್ ಗಳಿಸುತ್ತಾರೆ. ಇದರೊಂದಿಗೆ ಐಎಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.
ಸರಣ್ಯ ಅವರು ತಮ್ಮ ಶಿಕ್ಷಣ ಸಂಸ್ಥೆಯಿಂದ ಐಎಎಸ್ ಅಧಿಕಾರಿಯಾದ ಮೊದಲಿಗರಾಗಿದ್ದಾರೆ. ಈ ಮೂಲಕ ಭವಿಷ್ಯದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಜೊತೆಗೆ ಗ್ರಾಮೀಣ ಭಾಗದಿಂದ ಬರುವ ಸಾವಿರಾರು ಯುಪಿಎಸ್ಸಿ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ.