ಹೈದರಾಬಾದ್, ಜೂ. 13 (DaijiworldNews/TA): ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಭಯೋತ್ಪಾದನೆಯನ್ನು ಪ್ರಾಯೋಜಿಸುವವರಿಗೆ ಸಿಂಧೂ ನದಿಯ ನೀರು ತಲುಪಲು ಎನ್ಡಿಎ ಸರ್ಕಾರ ಎಂದಿಗೂ ಅವಕಾಶ ನೀಡುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತೆಲಂಗಾಣ ಬಿಜೆಪಿ ಹೈದರಾಬಾದ್ನಲ್ಲಿ ಆಯೋಜಿಸಿದ್ದ ಇಂಟೆಲೆಕ್ಚುವಲ್ಸ್ ಮೀಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಂತಿ ಮತ್ತು ಸೌಹಾರ್ದತೆಯ ಭಾಷೆಯನ್ನು ಅರ್ಥಮಾಡಿಕೊಳ್ಳದವರಿಗೆ ಹೇಗೆ ಉತ್ತರಿಸಬೇಕು ಎಂಬುದನ್ನು ಭಾರತ ‘ಆಪರೇಷನ್ ಸಿಂಧೂರ್’ ಮೂಲಕ ಜಗತ್ತಿಗೆ ತೋರಿಸಿದೆ ಎಂದು ಹೇಳಿದರು. ಕಳೆದ ವರ್ಷ ನಡೆದ ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವ ಮೂಲಕ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
“ಯಾರ ಕಣ್ಣೀರು ಒಣಗಿ ಹೋಗಿದೆಯೋ, ಅವರು ನಮ್ಮಿಂದ ನೀರನ್ನು ನಿರೀಕ್ಷಿಸಬಾರದು. ಮಾನವೀಯತೆಯ ಶತ್ರುಗಳಿಗೆ ಹಾಗೂ ಭಯೋತ್ಪಾದಕರ ಪೋಷಕರಿಗೆ ಸಿಂಧೂ ನೀರನ್ನು ನೀಡುವುದಿಲ್ಲ” ಎಂದು ಅವರು ಖಡಕ್ ಎಚ್ಚರಿಕೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಪಹಲ್ಗಾಮ್ ದಾಳಿಯ ಬಳಿಕ ನೀಡಿದ್ದ “ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ” ಎಂಬ ಹೇಳಿಕೆಯನ್ನು ಇದೇ ವೇಳೆ ಅವರು ಉಲ್ಲೇಖಿಸಿದರು.
ಭಾರತ ಮತ್ತು ಪಾಕಿಸ್ತಾನ ನಡುವೆ 1960ರ ಸೆಪ್ಟೆಂಬರ್ 19ರಂದು ಸಿಂಧೂ ನದಿ ವ್ಯವಸ್ಥೆಯ ಬಳಕೆಗೆ ಸಂಬಂಧಿಸಿದಂತೆ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲ ಮುಂದುವರಿದಿರುವ ಹಿನ್ನೆಲೆಯಲ್ಲಿ, ಭಾರತ ತನ್ನ ಸಾರ್ವಭೌಮ ಹಕ್ಕು ಚಲಾಯಿಸಿ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಅವರು ಹೇಳಿದರು.
ಕಳೆದ 12 ವರ್ಷಗಳಲ್ಲಿ ಎನ್ಡಿಎ ಸರ್ಕಾರ ಸಾಧಿಸಿರುವ ಪ್ರಮುಖ ಮೈಲಿಗಲ್ಲುಗಳನ್ನು ರಾಜನಾಥ್ ಸಿಂಗ್ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. “ಆರ್ಟಿಕಲ್ 370 ಅನ್ನು ಯಾರೂ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿತ್ತು. ಆದರೆ ನಮ್ಮ ಸರ್ಕಾರ ಅದನ್ನು ಯಶಸ್ವಿಯಾಗಿ ರದ್ದುಗೊಳಿಸಿದೆ. ದೇಶವನ್ನು ನಕ್ಸಲ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ” ಎಂದು ಹೇಳಿದರು.
ಜಿಎಸ್ಟಿ ಜಾರಿ, ಮನೆ ಮನೆಗೆ ವಿದ್ಯುದ್ದೀಕರಣ, ನ್ಯಾಯಾಂಗ ವ್ಯವಸ್ಥೆಯ ಸುಧಾರಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರ ಸಾಧನೆ ಮಾಡಿದೆ ಎಂದು ಅವರು ವಿವರಿಸಿದರು. ಒಂದು ಕಾಲದಲ್ಲಿ ಭಯೋತ್ಪಾದನೆಗೆ ಹೆಸರಾಗಿದ್ದ ಕಾಶ್ಮೀರ ಇಂದು ಪ್ರವಾಸೋದ್ಯಮ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ಕೇಂದ್ರವಾಗಿ ರೂಪುಗೊಳ್ಳುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
“ಶ್ರೀನಗರದ ಲಾಲ್ ಚೌಕ್ನಲ್ಲಿ ಇಂದು ತ್ರಿವರ್ಣ ಧ್ವಜ ಹೆಮ್ಮೆಯಿಂದ ಹಾರಾಡುತ್ತಿದೆ. ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮೊಹರಂ ಮೆರವಣಿಗೆಗಳು ಶಾಂತಿಯುತವಾಗಿ ನಡೆಯುತ್ತಿವೆ. ದಶಕಗಳಿಂದ ಮುಚ್ಚಿದ್ದ ಸಿನಿಮಾ ಹಾಲ್ಗಳು ಮತ್ತೆ ಬಾಗಿಲು ತೆರೆದಿವೆ” ಎಂದು ಅವರು ಕಾಶ್ಮೀರದಲ್ಲಿನ ಬದಲಾವಣೆಗಳನ್ನು ವಿವರಿಸಿದರು.