ಕೋಲ್ಕತ್ತಾ, ಜೂ. 13 (DaijiworldNews/AA): ಕೋಲ್ಕತ್ತಾ ಪೊಲೀಸರು ಮತ್ತು ಪಶ್ಚಿಮ ಮೇದಿನಿಪುರ ಪೊಲೀಸರ ಜಂಟಿ ತಂಡ ಶನಿವಾರ ಬೆಳ್ಳಂಬೆಳಗ್ಗೆ ಕೇಂದ್ರ ಪಡೆಗಳೊಂದಿಗೆ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಮೇಲೆ ರಾತ್ರಿಯಿಡೀ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೊಲೀಸ್ ಕಾರ್ಯಾಚರಣೆಯು ಇಂದು ಬೆಳಗಿನ ಜಾವ 3 ಗಂಟೆಯ ನಂತರ ಪ್ರಾರಂಭವಾಗಿದ್ದು, 4 ಗಂಟೆಗಳಿಗೂ ಹೆಚ್ಚು ಕಾಲ ಶೋಧ ಮುಂದುವರೆಯಿತು. ಇನ್ನು ದಾಳಿಯ ಮಾಹಿತಿ ಪಡೆದ ಮಾಜಿ ಸಿಎಂ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತಕ್ಷಣ ಅಭಿಷೇಕ್ ಅವರ ನಿವಾಸಕ್ಕೆ ಧಾವಿಸಿದರು.
ಅಧಿಕಾರಿಗಳು, ಅಭಿಷೇಕ್ ಬ್ಯಾನರ್ಜಿ ಅವರ ಕಾಲಿಘಾಟ್ ನಿವಾಸದ ಬಾಗಿಲುಗಳನ್ನು ಪದೇ ಪದೇ ತಟ್ಟಿದರು. ಆದರೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಹೀಗಾಗಿ ಪೊಲೀಸ್ ಸಿಬ್ಬಂದಿ ಬೀಗವನ್ನು ಒಡೆದು ಶೋಧ ಕಾರ್ಯಾಚರಣೆ ನಡೆಸಲು ಮನೆ ಪ್ರವೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, 'ಪೊಲೀಸ್ ಸಿಬ್ಬಂದಿ ಬೀಗವನ್ನು ಒಡೆದು ಇಡೀ ಆವರಣವನ್ನು ಶೋಧಿಸಿದ್ದಾರೆ ಮತ್ತು ಬಲವಂತವಾಗಿ ಮನೆ ಪ್ರವೇಶಿಸಿದ್ದಾರೆ. ಅಧಿಕಾರಿಗಳು ಬೀಗವನ್ನು ಒಡೆದು ಇಡೀ ಮನೆಯನ್ನು ಶೋಧಿಸಿದ್ದಾರೆ' ಎಂದು ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ.