ತಿರುವನಂತಪುರಂ, ಜೂ. 13 (DaijiworldNews/AA): ಕೇರಳದ ಸಿಎಂ ವಿ.ಡಿ.ಸತೀಶನ್ ಮತ್ತು ಅವರ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

ಅಟ್ಟಿಂಗಲ್ ನಿವಾಸಿ ಸೋನಿ ಥಾಮಸ್ ಬಂಧಿತ ಆರೋಪಿ.
ಶುಕ್ರವಾರ ಸಂಜೆ 6:50 ರ ಸುಮಾರಿಗೆ ತಿರುವನಂತಪುರ ನಗರ ಜಿಲ್ಲಾ ಪೊಲೀಸ್ ಕಮಾಂಡ್ & ಕಂಟ್ರೋಲ್ ಸೆಂಟರ್ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಈ ವೇಳೆ ಆತ ವಿ.ಡಿ.ಸತೀಶನ್ ಹಾಗೂ ಅವರ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ. ಆತನೊಂದಿಗೆ ಮಾತನಾಡುತ್ತಿದ್ದ ಅಧಿಕಾರಿ ಕೊಲೆ ಬೆದರಿಕೆಗೆ ಕಾರಣವೇನೆಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಆರೋಪಿ, ನನಗೆ ಸತೀಶನ್ ಇಷ್ಟವಿಲ್ಲ ಎಂದು ಹೇಳಿರುವುದಾಗಿ ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ.
ಇದಾದ ಬಳಿಕ 6:53 ಕ್ಕೆ ಆರೋಪಿ ಮತ್ತೊಮ್ಮೆ ಕರೆ ಮಾಡಿ ಪುನಃ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೇ, ಪೊಲೀಸ್ ಅಧಿಕಾರಿಗೆ ಅಸಭ್ಯ ಪದಗಳಿಂದ ನಿಂದಿಸಿದ್ದಾನೆ. ಮುಖ್ಯಮಂತ್ರಿಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದಿಯೇ ಎಂದು ಪ್ರಶ್ನಿಸಿದ್ದಾನೆ ಎನ್ನಲಾಗಿದೆ.
ತಕ್ಷಣವೇ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೆದರಿಕೆ ಕರೆ ಬಂದಿದ್ದ ಫೋನ್ ನಂಬರ್ ಆಧರಿಸಿ ತನಿಖೆ ಆರಂಭಿಸಿದ್ದಾರೆ. ಮೊಬೈಲ್ ಸಂಖ್ಯೆಯ ಸಿಗ್ನಲ್ ಟ್ರ್ಯಾಕ್ ಮಾಡಿ ಶನಿವಾರ ಬೆಳಗ್ಗೆ ಆರೋಪಿ ಥಾಮಸ್ನನ್ನು ಅಟ್ಟಿಂಗಲ್ನಲ್ಲಿ ವಶಕ್ಕೆ ಪಡೆದಿದ್ದಾರೆ. ಕರೆ ಮಾಡಿ ಬೆದರಿಕೆ ಹಾಕಿದ್ದ ವೇಳೆ ಆರೋಪಿ ಮದ್ಯದ ಅಮಲಿನಲ್ಲಿದ್ದ. ಇನ್ನು ಬಂಧಿತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಮನವಿ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.