ದಿಸ್ಪುರ, ಜೂ. 13 (DaijiworldNews/AA): ಅಸ್ಸಾಂನ ಜೋರ್ಹತ್ನಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ಶನಿವಾರ ಭಾರತೀಯ ವಾಯುಪಡೆಯ ಎಎನ್ -32 ಸಾರಿಗೆ ವಿಮಾನ ಪತನವಾಗಿದೆ. ಈ ಅವಘಡದಲ್ಲಿ ಐವರು ವಾಯುಪಡೆ ಸಿಬ್ಬಂದಿ ಹುತಾತ್ಮರಾಗಿದ್ದು, ಸಹ ಪೈಲಟ್ ಗಾಯಗೊಂಡಿದ್ದಾರೆ.

ಸ್ಕ್ವಾಡ್ರನ್ ಲೀಡರ್ ಪ್ರಶಾಂತ್ ಸಿಂಗ್, ಫ್ಲೈಟ್ ಲೆಫ್ಟಿನೆಂಟ್ ಶುಭಮ್ ಕುಮಾರ್, ಸಾರ್ಜೆಂಟ್ ಜಿತೇಂದ್ರ ಶರ್ಮಾ, ಅಗ್ನಿವೀರ್ವಾಯು ಖೇಮರಾಮ್ ಕುಮಾವತ್ ಮತ್ತು ಅಗ್ನಿವೀರ್ವಾಯು ಡ್ಯಾನಿಶ್ ಆಲಂ ಮೃತರು ಎಂದು ಗುರುತಿಸಲಾಗಿದೆ.
ಭಾರತೀಯ ವಾಯುಪಡೆ ಮೃತರಿಗೆ ಎಕ್ಸ್ ಪೋಸ್ಟ್ನಲ್ಲಿ ಸಂತಾಪ ಸೂಚಿಸಿದೆ. ಜೋರ್ಹತ್ ಜಿಲ್ಲೆಯ ರೌರಿಯಾ ಪ್ರದೇಶದಲ್ಲಿರುವ ಭಾರತೀಯ ವಾಯುಪಡೆಯ ವಾಯುನೆಲೆಯಲ್ಲಿ ಇಳಿಯುವಾಗ ಎಎನ್ -32 ವಿಮಾನ ಪತನಗೊಂಡಿದೆ. ಐಎಎಫ್ ಘಟನೆಯನ್ನು ಖಚಿತಪಡಿಸಿದ್ದು, ಸಂಪೂರ್ಣ ಪರಿಶೀಲನೆ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ.