ಬೆಂಗಳೂರು,ಜೂ. 13 (DaijiworldNews/AK): ರಾಜ್ಯದ ಪ್ರಮುಖ ನಗರಗಳ ಹೊರತಾಗಿ, ಗ್ರಾಮೀಣ ಹಾಗೂ ಹಂತ-2 ಮತ್ತು ಹಂತ-3 ನಗರಗಳ ಯುವಜನರಿಗೆ ಉದಯೋನ್ಮುಖ ತಂತ್ರಜ್ಞಾನಗಳ ಪರಿಚಯ ಮಾಡಿಸಲು ಮತ್ತು ಅವರ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ರಾಜ್ಯದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಒಟ್ಟು 50 ಕೃತಕ ಬುದ್ಧಿಮತ್ತೆ (AI) ಪ್ರಯೋಗಾಲಯಗಳನ್ನ ಸ್ಥಾಪಿಸಲು ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ. ಕರ್ನಾಟಕದ ಸರ್ಕಾರಿ ಕಾಲೇಜುಗಳಲ್ಲಿ 50 ಎಐ ಪ್ರಯೋಗಾಲಯಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಸಣ್ಣ ನಗರಗಳ ವಿದ್ಯಾರ್ಥಿಗಳ ಉದ್ಯೋಗಾವಕಾಶ ಹೆಚ್ಚಿಸಲು ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ಆಯ್ದ ಸರ್ಕಾರಿ ಕಾಲೇಜುಗಳಲ್ಲಿ ಈ ಅತ್ಯಾಧುನಿಕ AI ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು. ಇದು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ, ಹೊಸ ಪ್ರಯೋಗಗಳು, ಕೌಶಲ್ಯಾಭಿವೃದ್ಧಿ ಮತ್ತು ನಾವೀನ್ಯತೆಗೆ ಭದ್ರವಾದ ಮೂಲಸೌಕರ್ಯವನ್ನು ಒದಗಿಸಲಿದೆ.
2026-27ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಘೋಷಿಸಲಾಗಿದ್ದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕೇಂದ್ರ ಸರ್ಕಾರದ ‘ಎಐ ಮಿಷನ್’ (AI Mission) ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಸ್ಥಾಪನೆಯಾಗುವ ಪ್ರತಿ ಪ್ರಯೋಗಾಲಯಕ್ಕೆ ಒಟ್ಟು 68.98 ಲಕ್ಷ ರೂಪಾಯಿ ಆರ್ಥಿಕ ನೆರವು ಸಿಗಲಿದ್ದು, ಮೂರು ವರ್ಷಗಳ ಅವಧಿಯಲ್ಲಿ ಮೂರು ಕಂತುಗಳಲ್ಲಿ ಈ ಹಣ ಬಿಡುಗಡೆಯಾಗಲಿದೆ. ಇದರ ಜೊತೆಗೆ, ಕರ್ನಾಟಕ ಸರ್ಕಾರವು ಈ ಯೋಜನೆಗಾಗಿ 10 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದು, ಅದರಲ್ಲಿ 6.29 ಕೋಟಿ ರೂಪಾಯಿಗಳನ್ನು ಮೊದಲ ವರ್ಷದಲ್ಲೇ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ.
ಈ ಯೋಜನೆಯ ಮೊದಲ ಹಂತವಾಗಿ ರಾಜ್ಯದ 23 ಪ್ರಮುಖ ಶೈಕ್ಷಣಿಕ ಸಂಸ್ಥೆಗಳನ್ನು ಆಯ್ಕೆ ಮಾಡಲು ಸರ್ಕಾರ ಹಸಿರು ನಿಶಾನೆ ತೋರಿದೆ.