ಕಾರವಾರ,ಸೆ 2 (Daijiworld News/RD): ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾದ ಬಾರೆ ಸಮೀಪ ಭಾನುವಾರದಿಂದ ನಾಪತ್ತೆಯಾಗಿದ್ದ ಕಾರವಾರ ಡಿವೈಎಸ್ಪಿ ಶಂಕರ ಮಾರಿಯಾಳ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿ ರವಿಚಂದ್ರ ಇಂದು ಯಲ್ಲಾಪುರ ತಾಲೂಕಿನ ಅರಬೈಲು ಅರಣ್ಯದಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಪೋನ್ ಮೂಲಕ ಮಾಹಿತಿ ನೀಡಿದ್ದಾರೆ ಜಿಲ್ಲಾಧಿಕಾರಿ ಎಂದು ಡಾ. ಹರೀಶ್ ಕುಮಾರ್ ಹೇಳಿದ್ದಾರೆ.
ಪ್ರಕರಣವೊಂದಕ್ಕೆ ಸಂಬಂಧಿಸಿ ಮಾಹಿತಿ ಕಲೆ ಹಾಕಲು ತೆರಳಿದ್ದ ಕಾರವಾರ ಡಿವೈಎಸ್ಪಿ ಮತ್ತು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಕಾಳಿ ನದಿಯ ಅಂಚಿನ ಕಾಡಿನಲ್ಲಿ ನಾಪತ್ತೆಯಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಇವರು ಯಲ್ಲಾಪುರ ತಾಲೂಕಿನ ಅರಬೈಲು ಅರಣ್ಯ ಭಾಗದಲ್ಲಿ ಪತ್ತೆಯಾಗಿದ್ದಾರೆ.
ಕೈಗಾ ಅರಣ್ಯ ಪ್ರದೇಶದಲ್ಲಿ ಪೋನ್ ಕಾಲ್ ಒಂದರ ಪತ್ತೆಗಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳ ತಂಡ ಮರಳಿ ಕಾರವಾರಕ್ಕೆ ಬರುವಾಗ ಕಾಡಿನಲ್ಲಿ ಡಿವೈಎಸ್ಪಿ ಹಾಗೂ ಗುಪ್ತಚರ ಇಲಾಖೆ ಅಧಿಕಾರಿ ರವಿಯವರು ತಂಡದಿಂದ ಹಿಂದೆ ಉಳಿದಿದ್ದರು. ಈ ವೇಳೆ ದಾರಿಯಲ್ಲಿ ಚಿರತೆ ಕಂಡ ಹಿನ್ನೆಲೆಯಲ್ಲಿ ತಪ್ಪಿಸಿಕೊಂಡು ಹೋಗುವ ಭರದಲ್ಲಿ ಕಾಡಿನಲ್ಲಿ ದಾರಿ ತಪ್ಪಿದ್ದು ರಾತ್ರಿಯಿಡಿ ಕಾಡಿನಲ್ಲಿ ಸುತ್ತಿ ಯಲ್ಲಾಪುರ ಬಳಿಯ ಅರಬೈಲು ಗಟ್ಟದ ಅರಣ್ಯ ತಲುಪಿದ್ದಾರೆ. ನಂತರ ಅಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.