ಬೆಂಗಳೂರು, ಜೂ. 14 (DaijiworldNews/TA): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಮೂಲಕ ಗಮನ ಸೆಳೆದರು. ಮಾಸ್ಕ್ ಹಾಗೂ ಗ್ಲೌಸ್ ಧರಿಸಿ ಸ್ವತಃ ಕಸ ಗುಡಿಸಿದ ಸಚಿವರು, ಬಳಿಕ ರಸ್ತೆಬದಿ ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದರು.

ಸ್ವಚ್ಛತಾ ಕಾರ್ಯಕ್ರಮದ ನಂತರ ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳನ್ನು ಭೇಟಿ ಮಾಡಿದ ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ಪಡೆದರು. ವಿಶೇಷವಾಗಿ ಸಣ್ಣ ವ್ಯಾಪಾರಿಗಳಿಗೆ ನೀಡಲಾಗುತ್ತಿರುವ ಸಾಲ ಸೌಲಭ್ಯಗಳ ಬಗ್ಗೆ ವಿಚಾರಿಸಿದರು.
ಈ ವೇಳೆ ವ್ಯಾಪಾರಿಗಳು ತಮ್ಮ ಸಮಸ್ಯೆಗಳನ್ನು ಸಚಿವರ ಮುಂದೆ ಹಂಚಿಕೊಂಡು, ಸಾಲ ಪಡೆಯಲು ಎದುರಿಸುತ್ತಿರುವ ಅಡಚಣೆಗಳ ಬಗ್ಗೆ ಗಮನ ಸೆಳೆದರು. ಕೆಲ ವ್ಯಾಪಾರಿಗಳು ನೇರವಾಗಿ “ನಮಗೂ ಲೋನ್ ಕೊಡಿಸಿ” ಎಂದು ಸಚಿವರ ಬಳಿ ಮನವಿ ಮಾಡಿದರು.
ವ್ಯಾಪಾರಿಗಳ ಅಹವಾಲುಗಳನ್ನು ಆಲಿಸಿದ ಸಚಿವರು, ಕೇಂದ್ರ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದು, ಸಂಬಂಧಿತ ಅಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಸಚಿವರ ಸರಳತೆ ಹಾಗೂ ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಿದ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.