ನವದೆಹಲಿ,ಸೆ 2 (Daijiworld News/RD): ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ)ಇಂದೂ ಕೂಡ ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆಗೆ ತೆರಳುವ ಮುನ್ನ ಶಾಸಕ ಡಿ.ಕೆ.ಶಿವಕುಮಾರ್ ಇಂದು ನಮ್ಮ ಹಿರಿಯರ ಪೂಜೆ ಇತ್ತು, ಅದರಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದೇ ಇರುವುದನ್ನು ನೆನೆದು ಮಾಧ್ಯಮದ ಮುಂದೆ ಕಣ್ಣೀರಿಟ್ಟರು.
ನವದೆಹಲಿಯಲ್ಲಿ ಇಡಿ ವಿಚಾರಣೆಗೆ ತೆರಳುವ ಸಂದರ್ಭದಲ್ಲಿ, ಮಾಧ್ಯಮಗಳ ಜೊತೆ ಮಾತನಾಡುತ್ತ ಇಂದು ನಮ್ಮ ತಂದೆ ಹಾಗೂ ಹಿರಿಯರಿಗೆ ನಾನು, ನನ್ನ ತಮ್ಮ ಪೂಜೆ ಮಾಡಬೇಕಿತ್ತು. ಆದರೆ ಅದಕ್ಕೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ, ಪರವಾಗಿಲ್ಲ, ಇಡಿ ಕಚೇರಿಯಲ್ಲೇ ಎಲ್ಲರನ್ನೂ ಸ್ಮರಿಸಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾರ್ಥಿಸುತ್ತೇನೆ ಎಂದು ಹೇಳುತ್ತಾ ಡಿಕೆಶಿ ಭಾವುಕರಾದರು.
ಕಾಂಗ್ರೆಸ್ ಪಕ್ಷಕ್ಕೋಸ್ಕರ, ನಮ್ಮ ನಾಯಕರಿಗೋಸ್ಕರ, ನನ್ನನ್ನು ನಂಬಿದ ಜನಕ್ಕೋಸ್ಕರ ಹೋರಾಟ ಮಾಡಿಕೊಂಡು ನಾನು ಬಂದಿದ್ದೇನೆ. ಇಂದು ನಮ್ಮ ಅನೇಕ ಸ್ನೇಹಿತರು, ಕಾರ್ಯಕರ್ತರು, ನಾಯಕರು ಪಕ್ಷ ಬೆಳೆಸಿರುವುದರಿಂದ ಇಲ್ಲಿಯವರೆಗೆ ಬಂದಿದ್ದೇನೆ. ಹಾಗಾಗಿ ಇದನ್ನೆಲ್ಲಾ ಎದುರಿಸುವಂತಹ ಶಕ್ತಿ ದೇವರು ನನಗೆ ಕೊಟ್ಟಿದ್ದಾನೆ. ನಾನು ಯಾರಿಗೂ ಮೋಸ ಮಾಡಿಲ್ಲ, ಕಳ್ಳತನ ಮಾಡಿಲ್ಲ, ಜಮೀನನ್ನು ಒತ್ತುವರಿ ಮಾಡಿಕೊಂಡಿಲ್ಲ, ಲಂಚದ ಆರೋಪವಿಲ್ಲ, ಅಧಿಕಾರ, ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿಲ್ಲ. ನೇರವಾಗಿ ನುಡಿದಂತೆ ನಡೆದಿದ್ದೇನೆ. ಆದರೆ ನನಗೆ ದುಖಃ ಆಗುತ್ತಿರುವುದು ನಾನು ನನ್ನ ಹಿರಿಯರಿಗೆ ಪೂಜೆ ಸಲ್ಲಿಸಲು ಎಡೆ ಮಾಡಿಕೊಡದೇ ಇರುವುದು ಬೇಸರ ತಂದಿದೆ ಎಂದರು.