ಉತ್ತರ ಪ್ರದೇಶ, ಜೂ. 15 (DaijiworldNews/AA): ದೃಢ ನಿರ್ಧಾರ, ಆತ್ಮವಿಶ್ವಾಸ ಮತ್ತು ಕುಟುಂಬದ ಬೆಂಬಲವಿದ್ದರೆ ಯಾವುದನ್ನಾದರೂ ಸಾಧಿಸಬಹುದು ಎಂಬುದಕ್ಕೆ ಮಯಾಂಕ್ ಬಾಜಪೈ ಅವರೇ ಸಾಕ್ಷಿ.

ಮಯಾಂಕ್ ಬಾಜಪೈ ಅವರು ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಮಹೋಲಿ ಪ್ರದೇಶದ ಕೈಮ್ಹರ ಗ್ರಾಮದವರು. ರೈತ ವಿಪಿನ್ ಕುಮಾರ್ ಬಾಜಪೈ ಮತ್ತು ಗೃಹಿಣಿ ಪೂನಂ ಬಾಜಪೈ ಅವರ ಪುತ್ರರಾದ ಮಯಾಂಕ್, 9ನೇ ತರಗತಿಯಿಂದ 12ನೇ ತರಗತಿಯವರೆಗೆ ಸೀತಾಪುರದ ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದರು.
ಬಳಿಕ ದೆಹಲಿಗೆ ತೆರಳಿದ ಮಯಾಂಕ್ ಅವರು, ದೆಹಲಿ ವಿಶ್ವವಿದ್ಯಾನಿಲಯದ ಸತ್ಯವತಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದರು. ನಂತರ ದೆಹಲಿ ವಿವಿಯ ನಾರ್ತ್ ಕ್ಯಾಂಪಸ್ನ ರಾಜ್ಯಶಾಸ್ತ್ರ ವಿಭಾಗದಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗದ ಅವಧಿಯಲ್ಲೇ ಅವರು ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದರು.
ಮಯಾಂಕ್ ಅವರು 2023ರಿಂದ ಹಪುರ್ ಜಿಲ್ಲೆಯ ನಿಜಾಮ್ಪುರದಲ್ಲಿರುವ ಸರ್ಕಾರಿ ಕೋಚಿಂಗ್ ಸೆಂಟರ್ನಲ್ಲಿ ಮಾರ್ಗದರ್ಶನ ಪಡೆದಿದ್ದರು. ಅವರು ತಮ್ಮ ಮೊದಲ ಎರಡು ಪ್ರಯತ್ನಗಳಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದರು. 2024ರಲ್ಲಿ ಮೂರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು, 149ನೇ ರ್ಯಾಂಕ್ ಗಳಿಸುವಲ್ಲಿ ಸಫಲರಾಗುತ್ತಾರೆ. ಈ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.