ನವದೆಹಲಿ,ಸೆ 2 (Daijiworld News/RD): ಬಾಲಾಕೋಟ್ ದಾಳಿಯ ಸಂದರ್ಭದಲ್ಲಿ ಮಿಗ್ 21 ವಿಮಾನ ಬಳಸಿ, ಪಾಕಿಸ್ತಾನದ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮನ್ ಸೋಮವಾರ ವಾಯುಪಡೆ ಮುಖ್ಯಸ್ಥನ ಜತೆ ಮತ್ತೆ ಮಿಗ್ -21 ವಿಮಾನ ಹಾರಾಟ ನಡೆಸಿದ್ದಾರೆ.
ಈ ಬಾರಿ ಏರ್ ಚೀಫ್ ಮಾರ್ಷಲ್ ಬೀರೇಂದರ್ ಸಿಂಗ್ ಧನೋವಾ ಅವರೊಂದಿಗೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮನ್ ವಿಮಾನದಲ್ಲಿ ಹಾರಾಟ ನಡೆಸಿ ಗಮನ ಸೆಳೆದಿದ್ದಾರೆ. "ಪಂಜಾಬ್ನ ಪಠಾಣ್ಕೋಟ್ ವಾಯುನೆಲದಿಂದ ಅಭಿನಂದನ್ ಹಾಗೂ ಏರ್ ಚೀಫ್ ಮಾರ್ಷಲ್ ಅವರನ್ನೊಳಗೊಂಡ ವಿಮಾನ ಹಾರಾಟ ನಡೆಸಿದೆ.ಸಂಪೂರ್ಣ ವೈದ್ಯಕೀಯ ತಪಾಸಣೆಯ ನಂತರ ಅಭಿನಂದನ್ ಅವರನ್ನು ಕಳೆದ ತಿಂಗಳು ವಿಮಾನ ಹಾರಾಟ ಹುದ್ದೆಗೆ ಮತ್ತೆ ಪರಿಗಣಿಸಲಾಗಿದೆ." ಎಂದು ಐಎಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಎಎಫ್ ಮೂಲಗಳ ಪ್ರಕಾರ ೩೦ ನಿಮಿಷ ಈ ವಿಮಾನ ಹಾರಾಟ ನಡೆಸಿದೆ. ಹಾಗೇ ಇದು ತರಬೇತಿ ನಿರತ ಮಿಗ್ -21 ವಿಮಾನದ ಹಾರಾಟವೆಂದು ಹೇಳಲಾಗಿದೆ.
ಬಾಲಾಕೋಟ್ ಮೇಲೆ ಫೆ. 26ರಂದು ವಾಯು ದಾಳಿ ನಡೆಸಲಾಗಿತ್ತು. ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಬಳಿಕ ಅಭಿನಂದನ್ ಚಲಾಯಿಸುತ್ತಿದ್ದ ಮಿಗ್-21 ಬೈಸನ್ ವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿತ್ತು. ಪ್ಯಾರಾಚೂಟ್ ಮೂಲಕ ಹೊರಕ್ಕೆ ಜಿಗಿದಿದ್ದ ಅಭಿನಂದನ್ ಅವರು ಗಾಯಗೊಂಡಿದ್ದರು. ಪಾಕಿಸ್ತಾನ ನೆಲದಲ್ಲಿ ಇಳಿದಿದ್ದ ಅವರನ್ನು ಅಲ್ಲಿನ ಪಡೆಯು ಫೆ. 27ರಂದು ಬಂಧಿಸಿತ್ತು. ಅವರ ಬಂಧನದ ಬಳಿಕ ಭಾರತ-ಪಾಕಿಸ್ತಾನದ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಮಾರ್ಚ್ 1ರಂದು ರಾತ್ರಿ ಅವರನ್ನು ಪಾಕಿಸ್ತಾನವು ಬಿಡುಗಡೆ ಮಾಡಿತ್ತು. ಭಾರತದ ಯೋಧ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಈ ಶೌರ್ಯಕ್ಕೆ ಸ್ವಾತಂತ್ರ್ಯೋತ್ಸವದಂದು 'ವೀರ ಚಕ್ರ' ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಗೌರವಿಸಿತು.