ತಿರುವನಂತಪುರಂ, ಜೂ. 15 (DaijiworldNews/TA): ಕೇರಳದಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕಾಗಿ ಆರಂಭಿಸಲಾದ ‘ಪ್ರಿಯದರ್ಶಿನಿ’ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಚಾನಕ್ ಅವಘಡ ಸಂಭವಿಸಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಬಿಂದು ಕೃಷ್ಣ ಅವರ ತಲೆಯ ಮೇಲೆ ಬಿಸಿ ಪಾಯಸ ಬಿದ್ದ ಘಟನೆ ಕೊಲ್ಲಂನಲ್ಲಿ ನಡೆದಿದೆ.

ಕೊಲ್ಲಂ ಕೆಎಸ್ಆರ್ಟಿಸಿ ಡಿಪೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಮತ್ತು ಅತಿಥಿಗಳಿಗೆ ಪಾಯಸ ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಜನದಟ್ಟಣೆಯಿಂದ ತುಂಬಿದ್ದ ಬಸ್ನೊಳಗೆ ಪಾಯಸ ವಿತರಿಸುತ್ತಿದ್ದಾಗ ಆಕಸ್ಮಿಕವಾಗಿ ಪಾತ್ರೆ ವಾಲಿ, ಬಿಸಿ ಪಾಯಸ ಸಚಿವೆಯ ತಲೆಯ ಮೇಲೆ ಚೆಲ್ಲಿದೆ.
ಘಟನೆ ನಡೆದ ತಕ್ಷಣ ಅಲ್ಲಿದ್ದ ಕಾರ್ಯಕರ್ತರು ಮತ್ತು ಅಧಿಕಾರಿಗಳು ಟವೆಲ್ ಹಾಗೂ ಶಾಲು ಬಳಸಿ ಸಚಿವೆಯ ತಲೆ ಮತ್ತು ಮುಖವನ್ನು ಒರೆಸಿದರು. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದರೂ ಸಚಿವೆ ಶಾಂತಚಿತ್ತದಿಂದ ಪರಿಸ್ಥಿತಿಯನ್ನು ನಿಭಾಯಿಸಿದರು. ಬಿಸಿ ಪಾಯಸದಿಂದ ಅಸ್ವಸ್ಥತೆ ಉಂಟಾದರೂ ಕಾರ್ಯಕ್ರಮವನ್ನು ಮಧ್ಯದಲ್ಲೇ ನಿಲ್ಲಿಸಲು ಅವರು ನಿರಾಕರಿಸಿದರು. ಯೋಜನೆಯ ಉದ್ಘಾಟನಾ ಬಸ್ನಲ್ಲಿ ಪ್ರಯಾಣ ಮುಂದುವರಿಸಿ, ನಿಗದಿತ ಸ್ಥಳವಾದ ಚಿನ್ನಕ್ಕಡವರೆಗೆ ತೆರಳಿ ಬಳಿಕ ಹಿಂದಿರುಗಿದರು.
ಘಟನೆಯ ವೇಳೆ ಬಸ್ನಲ್ಲಿದ್ದ ಪ್ರಯಾಣಿಕರು ಮತ್ತು ಕಾರ್ಯಕರ್ತರು ಕ್ಷಣಕಾಲ ಬೆಚ್ಚಿಬಿದ್ದಿದ್ದರು. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತ ಹಾಗೂ ಕೆಎಸ್ಆರ್ಟಿಸಿ ಅಧಿಕಾರಿಗಳು ವಿಡಿಯೊ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರಿಯದರ್ಶಿನಿ ಯೋಜನೆಯ ಉದ್ಘಾಟನಾ ಸಂಭ್ರಮದ ನಡುವೆ ನಡೆದ ಈ ಅನಿರೀಕ್ಷಿತ ಘಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಲ್ಲಿ ಆತಂಕ ಮೂಡಿಸಿದರೂ, ಸಚಿವೆಯ ಸಮಚಿತ್ತದ ವರ್ತನೆ ಮೆಚ್ಚುಗೆಗೆ ಪಾತ್ರವಾಗಿದೆ.