ಚೆನ್ನೈ, ಜೂ. 15 (DaijiworldNews/AA): ತಮಿಳುನಾಡು ಮುಖ್ಯಮಂತ್ರಿ, ಖ್ಯಾತ ನಟ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣದ ವಿಚಾರಣೆಯನ್ನು ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯವು ಆಗಸ್ಟ್ 7ಕ್ಕೆ ಮುಂದೂಡಿದೆ.

ಸೋಮವಾರ ನಡೆದ ವಿಚಾರಣೆಗೆ ಕೋರ್ಟ್ ಸೂಚನೆಯಂತೆ ವಿಜಯ್ ಮತ್ತು ಸಂಗೀತಾ ಖುದ್ದಾಗಿ ಹಾಜರಾಗಿದ್ದರು. ಬೆಳಿಗ್ಗೆ 10:30ರ ಸುಮಾರಿಗೆ ಆರಂಭವಾದ ವಿಚಾರಣೆಯಲ್ಲಿ ದಂಪತಿ ಉಪಸ್ಥಿತರಿದ್ದರಾದರೂ, ಯಾವುದೇ ಪ್ರಮುಖ ನಿರ್ಧಾರ ಅಥವಾ ಸಂಧಾನ ಸೂತ್ರಗಳು ಮೂಡಿಬರದೆ ಸೆಷನ್ ಮುಕ್ತಾಯಗೊಂಡಿತು.
ಸಂಗೀತಾ ಅವರು ತಮ್ಮ 27 ವರ್ಷಗಳ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ತೆರೆ ಎಳೆಯಲು ವಿಚ್ಛೇದನ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಸಂಗೀತಾ ಅವರು '1954ರ ವಿಶೇಷ ವಿವಾಹ ಕಾಯ್ದೆ'ಯಡಿ ವಿಜಯ್ ವಿರುದ್ಧ ವಿವಾಹೇತರ ಸಂಬಂಧ ಮತ್ತು ಮಾನಸಿಕ ಕ್ರೌರ್ಯದ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.
ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ, 2021ರ ಏಪ್ರಿಲ್ನಲ್ಲಿ ವಿಜಯ್ ಅವರು ಸಹ ನಟಿಯೊಬ್ಬರ ಜೊತೆ ಸಂಬಂಧ ಹೊಂದಿರುವುದು ಸಂಗೀತಾ ಅವರಿಗೆ ತಿಳಿದುಬಂದಿತ್ತು. ಅರ್ಜಿಯಲ್ಲಿ ನಟಿಯ ಹೆಸರನ್ನು ಬಹಿರಂಗಪಡಿಸದಿದ್ದರೂ, ಚಿತ್ರರಂಗ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ತ್ರಿಶಾ ಕೃಷ್ಣನ್ ಜೊತೆ ವಿಜಯ್ ಹೆಸರು ವ್ಯಾಪಕವಾಗಿ ಕೇಳಿಬರುತ್ತಿದೆ. ಆ ಸಂಬಂಧವನ್ನು ಕೊನೆಗೊಳಿಸುವುದಾಗಿ ವಿಜಯ್ ಭರವಸೆ ನೀಡಿದ್ದರಾದರೂ, ಅದನ್ನು ಮುಂದುವರಿಸಿದ್ದರು. ಅಲ್ಲದೆ, ಆ ನಟಿ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಜೊತೆಯಾಗಿ ಇರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾಗ ವಿಜಯ್ ಯಾವುದೇ ಆಕ್ಷೇಪ ಎತ್ತುತ್ತಿರಲಿಲ್ಲ. ಇದು ತಮಗೆ ಮತ್ತು ತಮ್ಮ ಮಕ್ಕಳಿಗೆ ತೀವ್ರ ಮುಜುಗರ ಹಾಗೂ ಮಾನಸಿಕ ಹಿಂಸೆ ನೀಡಿದೆ ಎಂದು ಸಂಗೀತಾ ಅರ್ಜಿಯಲ್ಲಿ ತಿಳಿಸಿದ್ದಾರೆ.