ಉತ್ತರ ಪ್ರದೇಶ, ಜೂ. 15 (DaijiworldNews/TA): ಹಾವು ಕಂಡರೆ ಹೆದರಿ ಓಡುವವರೇ ಹೆಚ್ಚು. ಆದರೆ ಹಾವುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಬಿಡುವ ಕೆಲಸ ಮಾಡುವವರು ವಿರಳ. ಅದರಲ್ಲಿ ಮಹಿಳೆಯರ ಸಂಖ್ಯೆ ಇನ್ನೂ ಕಡಿಮೆ. ಅಂತಹ ಅಪರೂಪದ ಸಾಹಸಿಗಳಲ್ಲಿ ಒಬ್ಬರು 22 ವರ್ಷದ ನಜ್ರುನ್ ನಿಶಾ.

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಪಾಲಿಯಾ ಪ್ರದೇಶದ ನಿವಾಸಿಯಾಗಿರುವ ನಜ್ರುನ್ ನಿಶಾ, ಹಾವುಗಳನ್ನು ರಕ್ಷಿಸುವ ಕಾರ್ಯದಲ್ಲಿ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ರಕ್ಷಣಾ ಕಾರ್ಯಾಚರಣೆಯ ವೇಳೆ ಆರು ಅಡಿ ಉದ್ದದ ಧಮನ್ (ಇಲಿ ಹಾವು) ಅವರನ್ನು ಕಚ್ಚಿದರೂ, ಅವರು ಧೈರ್ಯ ಕಳೆದುಕೊಳ್ಳದೆ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಜಿತ್ ನಗರದಲ್ಲಿನ ಅಂಗಡಿಯೊಂದಕ್ಕೆ ನುಗ್ಗಿದ್ದ ಹಾವನ್ನು ರಕ್ಷಿಸಲು ನಜ್ರುನ್ ನಿಶಾ ಅವರನ್ನು ಕರೆಸಲಾಗಿತ್ತು. ಹಾವನ್ನು ಹಿಡಿಯುವ ವೇಳೆ ಅದು ಅವರ ಕೈಗೆ ಕಚ್ಚಿದೆ. ಆದರೂ ಅವರು ಆತಂಕಕ್ಕೊಳಗಾಗದೆ, ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದು ರಕ್ಷಣಾ ಕಾರ್ಯವನ್ನು ಪೂರ್ಣಗೊಳಿಸಿದರು.
‘ಜಂಗಲ್ ಕ್ವೀನ್’ ಎಂದೇ ಖ್ಯಾತಿ : ದುಧ್ವಾ ಫೌಂಡೇಶನ್ನೊಂದಿಗೆ ಕಾರ್ಯನಿರ್ವಹಿಸುತ್ತಿರುವ ನಜ್ರುನ್ ನಿಶಾ ಅವರನ್ನು ಸ್ಥಳೀಯರು ‘ಜಂಗಲ್ ಕ್ವೀನ್’, ‘ರೆಸ್ಕ್ಯೂ ಗರ್ಲ್’ ಹಾಗೂ ‘ಸ್ನೇಕ್ ಫ್ರೆಂಡ್’ ಎಂದು ಕರೆಯುತ್ತಾರೆ. 19ನೇ ವಯಸ್ಸಿನಿಂದಲೇ ಹಾವು ರಕ್ಷಣಾ ಕಾರ್ಯ ಆರಂಭಿಸಿರುವ ಅವರು, ಈಗ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ನೆರವಾಗುವ ಪ್ರಮುಖ ರಕ್ಷಕಿಯಾಗಿದ್ದಾರೆ.
100ಕ್ಕೂ ಹೆಚ್ಚು ಹಾವು, 10 ಮೊಸಳೆಗಳ ರಕ್ಷಣೆ : ನಜ್ರುನ್ ನಿಶಾ ಇದುವರೆಗೆ 100ಕ್ಕೂ ಹೆಚ್ಚು ಹಾವುಗಳು ಹಾಗೂ 10 ಮೊಸಳೆಗಳನ್ನು ರಕ್ಷಿಸಿದ್ದಾರೆ. ಹಾವು ಕಚ್ಚಿದ ಬಳಿಕ ಅವರು ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದು, ಇದೀಗ ಸಂಪೂರ್ಣ ಆರೋಗ್ಯವಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, “ಹಾವು ಕಚ್ಚಿದರೆ ಭಯಪಡಬೇಡಿ. ತಕ್ಷಣ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಿರಿ. ಮೂಢನಂಬಿಕೆಗಳಿಗೆ ಒಳಗಾಗಬೇಡಿ,” ಎಂದು ಜನರಿಗೆ ಸಂದೇಶ ನೀಡಿದ್ದಾರೆ. ನಜ್ರುನ್ ಅವರನ್ನು ಕಚ್ಚಿದ ಧಮನ್ ಅಥವಾ ಇಲಿ ಹಾವು ವಿಷಕಾರಿಯಲ್ಲ. ಆದಾಗ್ಯೂ ಯಾವುದೇ ಹಾವು ಕಚ್ಚಿದ ಬಳಿಕ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ. ಧೈರ್ಯ, ಸಮಯಪ್ರಜ್ಞೆ ಮತ್ತು ಜೀವಿಗಳ ಮೇಲಿನ ಕಾಳಜಿಯಿಂದ ನಜ್ರುನ್ ನಿಶಾ ಇದೀಗ ಸಾವಿರಾರು ಮಂದಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಸಾಹಸಮಯ ಸೇವೆ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಮೆಚ್ಚುಗೆ ಗಳಿಸಿದೆ.