ನವದೆಹಲಿ, ಜೂ. 15 (DaijiworldNews/TA): ಭಾರತೀಯ ಸೇನೆಯು ತನ್ನ ಉಡುಪು ನಿಯಮಾವಳಿಯಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ನೂತನ ನಿಯಮಾವಳಿಯನ್ನು ಪ್ರಕಟಿಸಿದೆ.

ಹೊಸ ನಿಯಮಾವಳಿಯ ಪ್ರಕಾರ, ಅಧಿಕಾರಿಗಳ ಔಪಚಾರಿಕ ಉಡುಪಿನಲ್ಲಿ ಸಾಂಪ್ರದಾಯಿಕ ಭಾರತೀಯ ಶೈಲಿಯ ಬಂದಿ ಜಾಕೆಟ್ನ್ನು ಸೇರಿಸಲಾಗಿದೆ. ಇದುವರೆಗೆ ಬ್ರಿಟಿಷ್ ಪರಂಪರೆಯನ್ನು ಆಧರಿಸಿದ್ದ ಕೆಲವು ಉಡುಪು ಮಾದರಿಗಳಿಗೆ ಬದಲಾಗಿ ಭಾರತೀಯ ಸಾಂಸ್ಕೃತಿಕ ಗುರುತನ್ನು ಪ್ರತಿಬಿಂಬಿಸುವ ಉಡುಪುಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಇದರೊಂದಿಗೆ ಎಲ್ಲಾ ಶ್ರೇಣಿಯ ಸೇನಾ ಸಿಬ್ಬಂದಿಗೆ ಹೊಸ ಮಾದರಿಯ ಚಳಿಗಾಲದ ಸಮವಸ್ತ್ರವನ್ನು ಪರಿಚಯಿಸಲಾಗಿದೆ. ಸಮವಸ್ತ್ರದಲ್ಲಿ ಏಕರೂಪತೆ ಹಾಗೂ ವೃತ್ತಿಪರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಮಹಿಳಾ ಸಿಬ್ಬಂದಿಗೆ ಸಂಬಂಧಿಸಿದಂತೆ ಕಾಸ್ಮೆಟಿಕ್ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಲಾಗಿದೆ. ಸಮವಸ್ತ್ರ ಧರಿಸಿರುವ ವೇಳೆ ಲಿಪ್ಸ್ಟಿಕ್, ಬಿಂದಿ, ಬಣ್ಣದ ನೇಲ್ ಪಾಲಿಶ್ ಹಾಗೂ ಮೂಗಿನ ಪಿನ್ ಧರಿಸಲು ಅವಕಾಶ ಇರುವುದಿಲ್ಲ ಎಂದು ಹೊಸ ನಿಯಮಾವಳಿ ಸ್ಪಷ್ಟಪಡಿಸಿದೆ. ಭಾರತೀಯ ಸೇನೆಯ ಈ ಕ್ರಮವು ವಸಾಹತುಶಾಹಿ ಕಾಲದ ಉಳಿಕೆ ಸಂಪ್ರದಾಯಗಳಿಂದ ದೂರ ಸರಿದು, ಸ್ವದೇಶಿ ಗುರುತನ್ನು ಬಲಪಡಿಸುವ ಜೊತೆಗೆ ಸೇನೆಯ ವೃತ್ತಿಪರತೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನವೆಂದು ಪರಿಗಣಿಸಲಾಗಿದೆ.