ನವದೆಹಲಿ, ಜೂ. 15 (DaijiworldNews/AA): ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ ದಂಪತಿ, ಐದು ವರ್ಷಗಳ ಹೋರಾಟದ ಬಳಿಕ ಕೊನೆ ಕ್ಷಣದಲ್ಲಿ ಒಂದಾದ ಘಟನೆಯೊಂದು ದೆಹಲಿಯ ನ್ಯಾಯಾಲಯವೊಂದರಲ್ಲಿ ನಡೆದಿದೆ.

ಶಿಖಾ ಮತ್ತು ಸೌರಭ್ ಎಂಬ ಜೋಡಿ 2020ರಲ್ಲಿ ವಿವಾಹವಾಗಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ಭಿನ್ನಾಭಿಪ್ರಾಯ, ಕಲಹಗಳಿಂದ ಈ ಜೋಡಿ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚ್ಛೇದನ ಪ್ರಕರಣ ವರ್ಷದಿಂದ ವರ್ಷಕ್ಕೆ ಮುಂದೂಡಿಕೆಯಾಗುತ್ತಲೇ ಇತ್ತು. ಅನೇಕ ವಿಚಾರಣೆಗಳು, ವಕೀಲರ ವಾದ-ಪ್ರತಿವಾದಗಳು, ನ್ಯಾಯಾಲಯದ ಸುತ್ತಾಟಗಳು ದಂಪತಿಯನ್ನು ಮಾತ್ರವಲ್ಲದೆ ಅವರ ಕುಟುಂಬಗಳನ್ನೂ ಸಂಕಷ್ಟಕ್ಕೆ ತಳ್ಳಿದ್ದವು.
ಈ ಪ್ರಕರಣ ಕೇವಲ ದಾಂಪತ್ಯ ಕಲಹವಾಗಿರದೆ, ಕುಟುಂಬಗಳ ಮಾನಸಿಕ ಮತ್ತು ಆರ್ಥಿಕ ಹೋರಾಟವಾಗಿ ಬದಲಾಯಿತು. ಶಿಖಾ ಅವರ ತಂದೆ, ಮಗಳ ವಿಚ್ಛೇದನಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದರು. ಪ್ರಕರಣದ ವೆಚ್ಚ ಮತ್ತು ಮಾನಸಿಕ ಒತ್ತಡ ಶಿಖಾ ಅವರ ತಂದೆಯ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರಿತ್ತು.
ಪರಿಣಾಮ ಶಿಖಾ ಅವರ ತಂದೆಗೆ ಹೃದಯಾಘಾತ ಸಂಭವಿಸಿತ್ತು. ಆರ್ಥಿಕ ಸಂಕಷ್ಟದಿಂದ ಅವರನ್ನು ಮೊದಲಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾವನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ತಿಳಿದ ತಕ್ಷಣ, ಸೌರಭ್ ಅವರು ಗುರುಗ್ರಾಮದ ಉತ್ತಮ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು, ಚಿಕಿತ್ಸೆಗಾಗಿ ಅಗತ್ಯ ವ್ಯವಸ್ಥೆ ಕಲ್ಪಿಸಿ, ಮಾವನ ಪ್ರಾಣ ಉಳಿಸಲು ನೆರವಾದರು.
ಕುಟುಂಬ ಸಂಕಷ್ಟದಲ್ಲಿದ್ದಾಗ, ವಿಚ್ಛೇದನ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದ ಸೌರಭ್ ಅವರ ನಡೆ ಕುಟುಂಬದವರಲ್ಲಿ ಅಚ್ಚರಿ ಮೂಡಿಸಿತ್ತು. ಮಾವ ಚೇತರಿಸಿಕೊಂಡ ಮರುದಿನವೇ ವಿಚ್ಛೇದನ ಪ್ರಕರಣದ ಮತ್ತೊಂದು ವಿಚಾರಣೆ ನಡೆಯಿತು. ಎಂದಿನಂತೆ ವಕೀಲರು ತಮ್ಮ ವಾದ ಮಂಡಿಸುತ್ತಿದ್ದರು. ಆದರೆ, ವಿಚಾರಣೆ ವೇಳೆ ಹಠಾತ್ತನೆ ಶಿಖಾ ಕೈಯಲ್ಲಿದ್ದ ವಿಚ್ಛೇದನ ಪತ್ರಗಳನ್ನು ಹರಿದುಹಾಕಿದರು. ಬಳಿಕ ಕೋರ್ಟ್ನಲ್ಲೇ ಪತಿಯತ್ತ ಓಡಿ ಹೋಗಿ ಅಪ್ಪಿಕೊಂಡರು. ಐದು ವರ್ಷಗಳ ಕೋಪ, ಅಸಮಾಧಾನ ಮತ್ತು ನೋವು ಕ್ಷಣಾರ್ಧದಲ್ಲಿ ಕರಗಿಹೋಯಿತು.