ಬೆಂಗಳೂರು,ಜೂ. 15 (DaijiworldNews/AK): ಆರ್ಎಸ್ಎಸ್ ನೋಂದಣಿಗೆ ಆಗ್ರಹಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬರೆದ ಬಹಿರಂಗ ಪತ್ರಕ್ಕೆ ಸ್ವತಃ RSS ಮುಖ್ಯಸ್ಥ ಭಾಗವತ್ ಪ್ರತಿಕ್ರಿಯಿಸಿದ್ದು, ಇದೊಂದು ರಾಜಕೀಯ ಗಿಮಿಕ್, ನಮ್ಮ ಚಟುವಟಿಕೆಗಳು ರಹಸ್ಯವಾಗಿಲ್ಲ. ಹಿಂದೂ ಧರ್ಮ ಎಲ್ಲಾದರೂ ರಿಜಿಸ್ಟರ್ ಆಗಿದೆಯೇ? ಸರ್ಕಾರಿ ಅನುದಾನ ಪಡೆಯುವವರಿಗೆ ಮಾತ್ರ ನೋಂದಣಿ ಅಗತ್ಯವಿದ್ದು, 1950ರಲ್ಲೇ ನಮ್ಮ ಸಂವಿಧಾನವನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೇರಳಂನ ತ್ರಿಶ್ಶೂರ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ ನೋಂದಣಿ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಮೋಹನ್ ಭಾಗವತ್, ಇದಕ್ಕೆ ನಾನು ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ. ನೋಂದಣಿ ಆಗದೇ ಇರುವ ಅನೇಕ ಚಟುವಟಿಕೆಗಳು ನಡೆಯುತ್ತಲೇ ಇವೆ. ನಾವು ಕದ್ದುಮುಚ್ಚಿ ಯಾವುದೂ ಮಾಡುತ್ತಿಲ್ಲ. ನಮ್ಮ ಎಲ್ಲ ಚಟುವಟಿಕೆಗಳು ತೆರೆದ ಮೈದಾನದಲ್ಲೇ ನಡೆಯುತ್ತವೆ ಎಂದರು.
ಜನರನ್ನು ಕರೆದು ಸಂಘದ ಬಗ್ಗೆ ಅವರಿಗೆ ಮುಕ್ತವಾಗಿ ತಿಳಿಸುತ್ತೇವೆ. ನಮ್ಮ ಕಾರ್ಯಕರ್ತರು ಪ್ರತಿದಿನ ಜನರ ನಡುವೆ ಇರುತ್ತಾರೆ. ಜನರು ನಮ್ಮನ್ನು ದಿನನಿತ್ಯ ನೋಡುತ್ತಾರೆ. ಹೀಗಿರುವಾಗ ನಾವು ರಹಸ್ಯವಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದು ಸುಳ್ಳು ಎಂದು ತಿರುಗೇಟು ನೀಡಿದ್ದಾರೆ.