ನವದೆಹಲಿ,ಜೂ. 15 (DaijiworldNews/AK): ಅಮೆರಿಕದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ಕೋಲ್ಡ್ ಮರ್ಡರರ್ ಎಂದು ಕಿಡಿಕಾರಿದ್ದಾರೆ.

ಒಮಾನ್ ಕರಾವಳಿಯ ಸಮೀಪ ಪಲಾವು ಧ್ವಜದ ಎಂಟಿ ಸೆಟ್ಟೆಬೆಲ್ಲೊ ತೈಲ ಟ್ಯಾಂಕರ್ ಮೇಲೆ ಅಮೆರಿಕ ಸೇನೆ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, ಡೊನಾಲ್ಡ್ ಟ್ರಂಪ್ ಭಾರತೀಯರ ಜೀವಹಾನಿಗೆ ನೀವು ಉತ್ತರಿಸಲೇಬೇಕು. ನೀವು ಒಬ್ಬ ನಿರ್ದಯ ಹಾಗೂ ಕೋಲ್ಡ್ ಮರ್ಡರರ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಅದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಪ್ರಶ್ನಿಸಿರುವ ಕ್ರೇಜಿವಾಲ್ , ಭಾರತೀಯರ ಜೀವಹಾನಿಯಂತಹ ಗಂಭೀರ ವಿಷಯದಲ್ಲಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಸಮರ್ಪಕವಾಗಿಲ್ಲ ಎಂದು ಆರೋಪಿಸಿದ್ದಾರೆ.
ಮೂವರು ಭಾರತೀಯರು ಮೃತಪಟ್ಟಿದ್ದರೂ ಪ್ರಧಾನಿ ಮೋದಿ ಮೌನವಾಗಿರುವುದು ದುರದೃಷ್ಟಕರ. ಶೀಘ್ರದಲ್ಲೇ ಭಾರತಕ್ಕೆ ಬಲಿಷ್ಠ ನಾಯಕತ್ವ ದೊರೆಯಲಿದೆ. ಭಾರತೀಯರ ಜೀವಕ್ಕೆ ಹಾನಿ ಮಾಡಿದವರನ್ನು ಹೊಣೆಗಾರರನ್ನಾಗಿ ಮಾಡುವ ಸರ್ಕಾರ ದೇಶಕ್ಕೆ ಬೇಕಿದೆ. ಭಾರತದ ಹಿತಾಸಕ್ತಿ ಮತ್ತು ಭಾರತೀಯರ ಜೀವದ ವಿಚಾರದಲ್ಲಿ ಯಾವುದೇ ವಿದೇಶಿ ನಾಯಕರು ನಿರ್ಲಕ್ಷ್ಯವಾಗಿ ವರ್ತಿಸಲು ಅವಕಾಶ ನೀಡಬಾರದು. ದೇಶಕ್ಕೆ ಬಲಿಷ್ಠ ನಾಯಕತ್ವದ ಅಗತ್ಯವಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.