ನವದೆಹಲಿ, ಜೂ. 16 (DaijiworldNews/TA): ಬಹುತೇಕ ಅಭ್ಯರ್ಥಿಗಳ ಕನಸು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರತಿಷ್ಠಿತ ಸೇವೆಗೆ ಸೇರುವುದು. ಆದರೆ ಉತ್ತರ ಪ್ರದೇಶದ ಯುವತಿ ಅದಿತಿ ಛಪರಿಯಾ ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸು ಗಳಿಸಿದರೂ ಅಲ್ಲೇ ನಿಲ್ಲದೆ, ಇನ್ನೂ ದೊಡ್ಡ ಗುರಿಯತ್ತ ಸಾಗಿದ ಉದಾಹರಣೆಯಾಗಿದ್ದಾರೆ.

2023ರ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದ ಅದಿತಿ ಅವರಿಗೆ ಭಾರತೀಯ ರೈಲ್ವೆ ರಕ್ಷಣಾ ಪಡೆ ಸೇವೆ (IRPFS) ದೊರಕಿತ್ತು. ಆದರೆ ತಮ್ಮ ಕನಸಿನ ಸೇವೆಗಾಗಿ ಅವರು ಮತ್ತೊಮ್ಮೆ ಪರೀಕ್ಷೆ ಬರೆಯುವ ನಿರ್ಧಾರ ಕೈಗೊಂಡರು.
2024ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಮತ್ತೊಮ್ಮೆ ಭಾಗವಹಿಸಿದ ಅದಿತಿ, ಅಖಿಲ ಭಾರತ ಮಟ್ಟದಲ್ಲಿ 97ನೇ ರ್ಯಾಂಕ್ ಗಳಿಸುವ ಮೂಲಕ ಗಮನ ಸೆಳೆದರು. ಈ ಸಾಧನೆಯೊಂದಿಗೆ ಅವರಿಗೆ ಭಾರತೀಯ ವಿದೇಶಾಂಗ ಸೇವೆ (IFS) ದೊರಕಿತು. ವಿಶೇಷವೆಂದರೆ, ಅವರು ಐಎಎಸ್ಗಿಂತಲೂ IFS ಸೇವೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯ ವ್ಯಾಪಾರ ಕುಟುಂಬದಲ್ಲಿ ಜನಿಸಿದ ಅದಿತಿ, ಬಾಲ್ಯದಿಂದಲೇ ಓದಿನಲ್ಲಿ ಮೇಲುಗೈ ಸಾಧಿಸಿದ್ದರು. 10ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಅಗ್ರಸ್ಥಾನ ಪಡೆದಿದ್ದ ಅವರು, 12ನೇ ತರಗತಿಯಲ್ಲಿ 99.5 ಶೇಕಡಾ ಅಂಕಗಳೊಂದಿಗೆ ದೇಶದ ಮಟ್ಟದಲ್ಲಿ ಮೂರನೇ ಸ್ಥಾನ ಗಳಿಸಿದ್ದರು.
ಅದಿತಿ ಗೋರಖ್ಪುರದ ಲಿಟಲ್ ಫ್ಲವರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿ, ನಂತರ ರಾಜಸ್ಥಾನದ ಅಜ್ಮೀರ್ನ ಮೇಯೊ ಕಾಲೇಜು ಗರ್ಲ್ಸ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಬಳಿಕ ದೆಹಲಿಯ ಪ್ರಸಿದ್ಧ ಶ್ರೀ ರಾಮ್ ಕಾಲೆಜ್ ಆಫ್ ಕಾಮರ್ಸ್ನಲ್ಲಿ ಪದವಿ ವ್ಯಾಸಂಗ ಮಾಡಿದರು.
ಕಾಲೇಜು ದಿನಗಳಲ್ಲೇ ನಾಗರಿಕ ಸೇವೆಗೆ ಸೇರುವ ಗುರಿ ಹೊಂದಿದ್ದ ಅವರು, ಅದಕ್ಕಾಗಿ ಸತತವಾಗಿ ತಯಾರಿ ನಡೆಸಿದರು. ಅದಿತಿ ಅವರ ಪ್ರಕಾರ, ಯಾವುದೇ ಮಹತ್ವದ ಸಾಧನೆ ಒಂದೇ ದಿನದಲ್ಲಿ ಸಿಗುವುದಿಲ್ಲ. ನಿರಂತರ ಪರಿಶ್ರಮ, ಸ್ಪಷ್ಟ ಗುರಿ, ಏಕಾಗ್ರತೆ ಮತ್ತು ಅಚಲ ಬದ್ಧತೆಯೇ ಯಶಸ್ಸಿನ ಮೂಲ ಅಡಿಪಾಯ ಎಂದು ಅವರು ನಂಬಿದ್ದಾರೆ.
ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪಾಸ್ ಆದ ಬಳಿಕವೂ ತೃಪ್ತಿಪಡದೆ, ಕನಸಿನ ಸೇವೆಗಾಗಿ ಮತ್ತೊಮ್ಮೆ ಪರೀಕ್ಷೆ ಬರೆದು ಯಶಸ್ಸು ಸಾಧಿಸಿರುವ ಅದಿತಿ ಛಪರಿಯಾ ಇಂದು ಸಾವಿರಾರು ಯುಪಿಎಸ್ಸಿ ಅಭ್ಯರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.