ನವದೆಹಲಿ, ಜೂ. 16 (DaijiworldNews/AA): ಡೀಸೆಲ್ ಮತ್ತು ವಿಮಾನ ಇಂಧನ ರಫ್ತುಗಳ ಮೇಲಿನ ಸುಂಕವನ್ನು ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಡೀಸೆಲ್ ರಫ್ತು ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು 50 ಪೈಸೆ ಏರಿಸಲಾಗಿದೆ. ಪ್ರತಿ ಲೀಟರ್ಗೆ 12.5 ರೂನಿಂದ 14 ರೂಗೆ ಹೆಚ್ಚಿಸಲಾಗಿದೆ. ವಿಮಾನ ಇಂಧನದ ರಫ್ತು ಸುಂಕವನ್ನು ಪ್ರತಿ ಲೀಟರ್ಗೆ 3 ರೂ ಹೆಚ್ಚಿಸಲಾಗಿದೆ. 9.5 ರೂ. ನಿಂದ 12.5 ರೂಗೆ ಏರಿಸಲಾಗಿದೆ. ಆದರೆ ಪೆಟ್ರೋಲ್ ಮೇಲಿನ ರಫ್ತು ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅದರ ಪ್ರತಿ ಲೀಟರ್ಗೆ ಅದರ ಸುಂಕ 1.5 ರೂ.ನಲ್ಲೇ ಮುಂದುವರಿಯಲಿದೆ.
ಈ ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬರಲಿದೆ. ತೆರಿಗೆಯಲ್ಲಿನ ಈ ಬದಲಾವಣೆಗಳು ಕೇವಲ ವಿದೇಶಗಳಿಗೆ ರಫ್ತು ಮಾಡುವ ಇಂಧನಕ್ಕೆ ಮಾತ್ರ ಅನ್ವಯಿಸುತ್ತವೆ. ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೀಗಾಗಿ ದೇಶದ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ದರ ಏರಿಕೆ ಅಥವಾ ಇಳಿಕೆಯಾಗುವುದಿಲ್ಲ.
ಭಾರತದ ತೈಲ ಸಂಸ್ಕರಣಾ ಕಂಪನಿಗಳು ದೇಶದ ಒಳಗಡೆ ಇಂಧನ ಮಾರಾಟ ಮಾಡುವ ಬದಲು, ವಿದೇಶಗಳಲ್ಲಿ ಹೆಚ್ಚಿನ ಬೆಲೆಗೆ ರಫ್ತು ಮಾಡಿ ಅತಿಯಾದ ಲಾಭ ಗಳಿಸುವುದನ್ನು ತಡೆಯಲು, ದೇಶದ ಒಳಗಡೆ ಇಂಧನದ ಕೊರತೆಯಾಗದಂತೆ ನೋಡಿಕೊಳ್ಳುವುದು ಮತ್ತು ದೇಶೀಯ ಮಾರುಕಟ್ಟೆಗೆ ಮೊದಲ ಆದ್ಯತೆ ನೀಡುವಂತೆ ಕಂಪನಿಗಳನ್ನು ಪ್ರೇರೇಪಿಸಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಇನ್ನು ಸರ್ಕಾರವು ಪ್ರತಿ 15 ದಿನಗಳಿಗೊಮ್ಮೆ ಜಾಗತಿಕ ತೈಲ ಬೆಲೆಗಳನ್ನು ಪರಿಶೀಲಿಸಿ ಈ ತೆರಿಗೆಯನ್ನು ಬದಲಾಯಿಸುತ್ತಿರುತ್ತದೆ.