ಬೀದರ್, ಜೂ. 16 (DaijiworldNews/TA): ಕನ್ನಡ ಕಿರುತೆರೆಯ ಜನಪ್ರಿಯ ಕಾಮಿಡಿ ರಿಯಾಲಿಟಿ ಶೋಗಳಾದ ‘ಕಾಮಿಡಿ ಕಿಲಾಡಿಗಳು’ ಹಾಗೂ ‘ಮಜಾ ಭಾರತ’ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ನಟ ಸಿದ್ದಾರ್ಥ ಪರಸನೂರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿ ನಡೆದಿದೆ.

ಹುಮ್ನಾಬಾದ್ನ ಟೀಚರ್ ಕಾಲೋನಿಯಲ್ಲಿ ವಾಸವಾಗಿದ್ದ ಸಿದ್ದಾರ್ಥ ಪರಸನೂರು ಅವರ ಮೃತದೇಹ ಪಟ್ಟಣದ ಹೊರವಲಯದ ಖಾಲಿ ಜಾಗವೊಂದರಲ್ಲಿ ಪತ್ತೆಯಾಗಿದೆ. ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಥಳೀಯರ ಪ್ರಕಾರ, ಮೃತದೇಹದ ಸ್ಥಿತಿ ನೋಡಿದಾಗ ಇದು ಸಹಜ ಸಾವು ಅಲ್ಲ ಎಂಬ ಅನುಮಾನಗಳು ವ್ಯಕ್ತವಾಗಿವೆ. ಕೆಲವರು ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಜವಾದ ಕಾರಣ ಬಹಿರಂಗವಾಗುವ ಸಾಧ್ಯತೆ ಇದೆ. ಸಿದ್ದಾರ್ಥ ಪರಸನೂರು ಅವರು ‘ಕಾಮಿಡಿ ಕಿಲಾಡಿಗಳು’ ಮತ್ತು ‘ಮಜಾ ಭಾರತ’ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಅವರ ಹಠಾತ್ ನಿಧನದ ಸುದ್ದಿ ಕಿರುತೆರೆ ಲೋಕ ಹಾಗೂ ಅಭಿಮಾನಿಗಳಿಗೆ ತೀವ್ರ ಆಘಾತ ಉಂಟುಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.