ನವದೆಹಲಿ, ಜೂ. 16 (DaijiworldNews/AA): ಮಂಗಳೂರು ಸೆಂಟ್ರಲ್, ಬೊರಿವಿಲಿ ಮತ್ತು ಅಂಬಾಲಾ ಸೇರಿದಂತೆ ದೇಶದ ಹಲವು ಜನನಿಬಿಡ ರೈಲು ನಿಲ್ದಾಣಗಳ ಮರುಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸೋಮವಾರ ಮರುಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ.

ಅತಿಯಾದ ದಟ್ಟಣೆ ಹೊಂದಿರುವ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಮರುಅಭಿವೃದ್ಧಿ ಯೋಜನೆಯಲ್ಲಿ, ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಎರಡು ಹೊಸ ಪ್ಲಾಟ್ಫಾರ್ಮ್ಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರೊಂದಿಗೆ ಅಸ್ತಿತ್ವದಲ್ಲಿರುವ ಪ್ಲಾಟ್ಫಾರ್ಮ್ಗಳ ಉನ್ನತೀಕರಣ, 6 ಮೀಟರ್ ಅಗಲದ ಹೊಸ ಪಾದಚಾರಿ ಮೇಲ್ಸೇತುವೆ ನಿರ್ಮಾಣ, ಸುಧಾರಿತ ಪ್ಲಾಟ್ಫಾರ್ಮ್ ಶೆಲ್ಟರ್ಗಳು ಮತ್ತು ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಹೆಚ್ಚುವರಿ ಎಸ್ಕಲೇಟರ್ಗಳು ಹಾಗೂ ಲಿಫ್ಟ್ಗಳನ್ನು ಅಳವಡಿಸುವುದು ಯೋಜನೆಯ ಭಾಗವಾಗಿದೆ.
ಪರಿಶೀಲನಾ ಸಭೆಯ ವೇಳೆ, ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮರುಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂದು ರೈಲ್ವೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಸ್ತುತ, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವು ಪ್ರತಿದಿನ 28,000ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುತ್ತಿದ್ದು, ಸುಮಾರು 50 ರೈಲು ಸೇವೆಗಳಿಗೆ ಆಧಾರವಾಗಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ, ಹೀಗಾಗಿ ನಿಲ್ದಾಣದ ಸಾಮರ್ಥ್ಯವನ್ನು ವಿಸ್ತರಿಸುವುದು ಮತ್ತು ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದು ಅತ್ಯಗತ್ಯವಾಗಿದೆ ಎಂದು ಮರುಅಭಿವೃದ್ಧಿ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.