ಮೈಸೂರು, ಜೂ. 16 (DaijiworldNews/AA): ನಗರದ ರಿಂಗ್ ರಸ್ತೆಯರುವ ಪಬ್ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಸಜೀವ ದಹನವಾಗಿದ್ದು, ಹಲವರು ಗಾಯಗೊಂಡಿರುತ್ತಾರೆ. ಇದೀಗ ಪಬ್ ಮಾಲೀಕ ಹಾಗೂ ನಟ ಪ್ರೀತಂ ಪುನೀತ್ ಅವರ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಪಬ್ನ ಪರವಾನಗಿ (ಲೈಸೆನ್ಸ್) ಅವಧಿ ಮುಗಿದಿದ್ದರೂ ಅಬಕಾರಿ ಇಲಾಖೆಯಿಂದ ನವೀಕರಣ ಮಾಡಿಸದೇ ವ್ಯವಹಾರ ನಡೆಸಲಾಗುತ್ತಿತ್ತು. ಜೊತೆಗೆ ಅಗ್ನಿ ಸುರಕ್ಷತೆಗೆ ಅಗತ್ಯವಾದ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದು ಕೂಡ ಈ ಅವಘಡಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪಬ್ನ ಒಳಾಂಗಣವನ್ನು ಒಣ ಹುಲ್ಲು ಮತ್ತು ಮರದ ವಸ್ತುಗಳಿಂದ ಅಲಂಕರಿಸಲಾಗಿತ್ತು. ಪಬ್ನಲ್ಲಿ ಬೆಂಕಿ ನಂದಿಸುವ ಸಿಲಿಂಡರ್ಗಳ ಕೊರತೆ, ಅಗ್ನಿ ಅವಘಡದ ಸಂದರ್ಭ ಬಳಸಬೇಕಾದ ತುರ್ತು ನಿರ್ಗಮನ ದ್ವಾರ ಕೂಡ ಇರಲಿಲ್ಲ ಎನ್ನಲಾಗಿದೆ.
ಕ್ಷಣಾರ್ಧದಲ್ಲಿ ಬೆಂಕಿ ಇಡೀ ಮೇಲ್ಮಹಡಿಗೆ ಹರಡಿ ಪಬ್ನಲ್ಲಿದ್ದ ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳು ಹಾಗೂ ಇತರ ಸಾಮಗ್ರಿಗಳು ಬೆಂಕಿಗಾಹುತಿಯಾಗಿದೆ. ಇನ್ನು ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಅವಘಡದಲ್ಲಿ ಇಬ್ಬರು ಸಜೀವ ದಹನವಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಇನ್ನು ಈ ದುರಂತದ ವೇಳೆ ಪಬ್ ಮಾಲೀಕ ನಟ ಪ್ರೀತಂ ಪುನೀತ್ ಹಾಗೂ ಅವರ ಸ್ನೇಹಿತ ಅವಿನಾಶ್ ಕೂಡ ಸ್ಥಳದಲ್ಲಿದ್ದರು. ಪ್ರೀತಂ ಅವರ ಕೈ ಹಾಗೂ ಮುಖಕ್ಕೆ ಸುಟ್ಟ ಗಾಯಗಳಾಗಿದ್ದು, ಅವಿನಾಶ್ ಅವರ ತಲೆಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.