ಬೆಳಗಾವಿ, ಜೂ. 16 (DaijiworldNews/TA): ನಗರದ ಉದ್ಯಮಭಾಗ ಕೈಗಾರಿಕಾ ಪ್ರದೇಶದಲ್ಲಿ ಕಸದ ವಿಂಗಡಣೆ ವೇಳೆ 59 ಗುಂಡುಗಳು ಪತ್ತೆಯಾಗಿದ್ದು, ಪೌರಕಾರ್ಮಿಕರು ಹಾಗೂ ಪೊಲೀಸರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಎಂದಿನಂತೆ ಕಸ ವಿಂಗಡಣೆ ಕಾರ್ಯದಲ್ಲಿ ನಿರತರಾಗಿದ್ದ ಪೌರಕಾರ್ಮಿಕರಿಗೆ ಕಸದ ರಾಶಿಯಲ್ಲಿ ಗುಂಡುಗಳು ಕಂಡುಬಂದಿವೆ. ಒಂದೆರಡು ಅಲ್ಲ, ಬರೋಬ್ಬರಿ 59 ಗುಂಡುಗಳು ಪತ್ತೆಯಾಗಿದ್ದರಿಂದ ಅವರು ಬೆಚ್ಚಿಬಿದ್ದಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಉದ್ಯಮಭಾಗ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಒಂದೇ ಸ್ಥಳದಲ್ಲಿ ಇಷ್ಟು ಸಂಖ್ಯೆಯಲ್ಲಿ ಗುಂಡುಗಳು ಪತ್ತೆಯಾಗಿದ್ದರಿಂದ ಆರಂಭದಲ್ಲಿ ಪೊಲೀಸರಲ್ಲೂ ಅನುಮಾನ ಹಾಗೂ ಆತಂಕ ಮೂಡಿತ್ತು. ಬಳಿಕ ಗುಂಡುಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಲಾಯಿತು. ತನಿಖೆ ವೇಳೆ ಈ ಪ್ರಕರಣದ ಹಿಂದೆ ಯಾವುದೇ ಅಪರಾಧ ಚಟುವಟಿಕೆ ಇಲ್ಲ ಎಂಬುದು ಬೆಳಕಿಗೆ ಬಂದಿದೆ. ವಿಜಯಪುರ ಮೂಲದ ಮಾಜಿ ಸೈನಿಕನೊಬ್ಬ ತನ್ನ ಸಂಬಂಧಿಕರ ಮಕ್ಕಳಿಗೆ ತೋರಿಸಲು ಬಳಕೆಯಾದ ಗುಂಡುಗಳನ್ನು ಬೆಳಗಾವಿಯಲ್ಲಿರುವ ಸಂಬಂಧಿಕರ ಮನೆಗೆ ತಂದಿದ್ದ ಎನ್ನಲಾಗಿದೆ.
ಮಕ್ಕಳಿಗೆ ತೋರಿಸಿದ ಬಳಿಕ ಮನೆಗೆ ವಾಪಸ್ಸಾಗುವ ವೇಳೆ ಆ ಗುಂಡುಗಳನ್ನು ಅಲ್ಲಿಯೇ ಬಿಟ್ಟು ಬಂದಿದ್ದಾನೆ. ನಂತರ ಸಂಬಂಧಿಕರು ಮನೆ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಅವುಗಳ ಮಹತ್ವ ಅರಿಯದೆ ಕಸದೊಂದಿಗೆ ಹೊರಗೆ ಎಸೆದಿದ್ದಾರೆ ಎನ್ನಲಾಗಿದೆ. ಇದೇ ಗುಂಡುಗಳು ಬಳಿಕ ಕಸದ ರಾಶಿಯಲ್ಲಿ ಪತ್ತೆಯಾಗಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ಪತ್ತೆಯಾದ ಎಲ್ಲಾ 59 ಗುಂಡುಗಳೂ ಈಗಾಗಲೇ ಬಳಕೆಯಾದವುಗಳಾಗಿದ್ದು, ಅವುಗಳಿಂದ ಯಾವುದೇ ಅಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಗುಂಡುಗಳು ಮಾಜಿ ಸೈನಿಕನ ಬಳಿ ಹೇಗೆ ಬಂದವು ಮತ್ತು ಅವುಗಳನ್ನು ಸಂಗ್ರಹಿಸಿಟ್ಟಿದ್ದ ಕಾರಣವೇನು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಘಟನೆ ಬೆಳಗಾವಿಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.