ಬೆಂಗಳೂರು, ಜೂ. 16 (DaijiworldNews/AK): 1948ರಲ್ಲಿ ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಪಕ್ಷದ ವಿಸರ್ಜನೆ ಮಾಡಲು ಹೇಳಿದ್ದರು. ಕಾಂಗ್ರೆಸ್ ಹೆಸರು ಬದಲಿಸಿ ಲೋಕ ಸೇವಕ ಸಂಘ ಎಂಬ ಹೆಸರು ಇಡಲು, ಮಹಿಳೆಯರು, ಹರಿಜನರು, ಗೋವುಗಳ ರಕ್ಷಣೆಗೆ ನಿಲ್ಲಲು ಹೇಳಿದ್ದರಲ್ಲವೇ? ಈಗ ನಿಮ್ಮ ತಂದೆಯವರೇ ಎಐಸಿಸಿ ಅಧ್ಯಕ್ಷರಿದ್ದಾರೆ. ಮಹಾತ್ಮ ಗಾಂಧಿಯವರ ಆಶಯಕ್ಕೆ ಅನುಗುಣವಾಗಿ ಕಾಂಗ್ರೆಸ್ಸನ್ನು ವಿಸರ್ಜಿಸುವುದು ಯಾವಾಗ ಎಂದು ಯಾಕೆ ಇನ್ನೂ ನೀವು ಪತ್ರ ಬರೆದಿಲ್ಲ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಿಯಾಂಕ್ ಖರ್ಗೆಯವರನ್ನು ಪ್ರಶ್ನಿಸಿದ್ದಾರೆ.

ಇಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆಯವರ ಪ್ರಶ್ನೆಗೆ ಮೋಹನ್ ಭಾಗವತ್ ಅವರು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಅವರಿಗೆ ಉತ್ತರ ಸಿಕ್ಕಿದೆ ಎಂದುಕೊಳ್ಳುವೆ. ಪ್ರಶ್ನೆ ಕೇಳಿದ ಕಾಂಗ್ರೆಸ್ಸಿನವರು ಗಾಂಪರ ದೊರೆಗಳಾಗಿದ್ದರು ಎಂದು ನುಡಿದರು.
ಮೋಹನ್ ಭಾಗವತ್ ಅವರು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ದೇಶದ ಕಾನೂನು ಒಂದೇ ಎನ್ನುವಿರಲ್ಲವೇ? ಹಾಗಿದ್ದರೆ ನೀವು ಕಾನೂನಿನ ಮೊರೆ ಯಾಕೆ ಹೋಗಿಲ್ಲ ಎಂದು ಕೇಳಿದರು. ಆರೆಸ್ಸೆಸ್ ಕುರಿತು ಪ್ರಶ್ನಿಸಿದ ಗಾಂಪರ ದೊರೆಗಳ ಪಟ್ಟಿಗೆ ಪ್ರಿಯಾಂಕ್ ಖರ್ಗೆಯವರೂ ಸೇರಿಕೊಂಡಿದ್ದಾರೆ ಎಂದು ತಿಳಿಸಿದರು.
ಮೀಡಿಯ- ಪತ್ರಿಕೆಗಳಲ್ಲಿ ಪ್ರಮುಖವಾಗಿ ಪ್ರಕಟಗೊಂಡು ನನ್ನನ್ನು ಮೇಧಾವಿ ಎಂದು ಜನರು ಅಂದುಕೊಳ್ಳಬೇಕು. ಇಷ್ಟೇನಾ ನಿಮ್ಮದು ಎಂದು ಪ್ರಶ್ನಿಸಿದರು. ಎಲ್ಲಕ್ಕಿಂತ ಮಿಗಿಲಾಗಿ ನೀವು ಪರಿಶಿಷ್ಟ ಜಾತಿ, ವರ್ಗದಿಂದ ಬಂದ ವ್ಯಕ್ತಿ. ತಳ ಸಮುದಾಯಗಳಿಗೆ ನ್ಯಾಯ ಕೊಟ್ಟು, ಅನ್ಯಾಯ ಸರಿಪಡಿಸಬೇಕೆಂದು ಬಾಬಾಸಾಹೇಬ ಅಂಬೇಡ್ಕರರು ದೊಡ್ಡ ಹೋರಾಟ ಮಾಡಿದ್ದರು. ಅಲ್ಲದೇ ಆ ಜನರ ಸಮಸ್ಯೆಗೆ ಪರಿಹಾರ ಕೊಡಲಿ ಎಂದು ಮೀಸಲಾತಿಯನ್ನು ಕೊಡಿಸಿದರು. ಈಗ ಆರೆಸ್ಸೆಸ್ನಿಂದ ಯಾವ ದಲಿತರಿಗೆ ಅನ್ಯಾಯವಾಗಿದೆ ಎಂದು ಪ್ರಶ್ನೆ ಮಾಡಿದರು.
ಆರೆಸ್ಸೆಸ್ ಅನ್ನು ಇದೆಲ್ಲ ಕೇಳುವಾಗ ದಲಿತರಿಗೆ ಆಗುವ ಒಳಿತೇನು ಎಂದು ಕೇಳಿದರು. ಇವತ್ತು ದಲಿತರಿಗೆ ಅನೇಕ ರೀತಿಯ ಅನ್ಯಾಯವಾಗುತ್ತಿದೆ. ಕಾಂಗ್ರೆಸ್ ಸರಕಾರದಿಂದ, ನಿಮ್ಮಿಂದಲೂ ಅನ್ಯಾಯ ಆಗುತ್ತಿದೆ. ಎಸ್ಇಪಿ, ಟಿಎಸ್ಪಿ ಹಣ ಆ ಜನಾಂಗಗಳಿಗೆ ತಲುಪುತ್ತಿಲ್ಲ. ಅದನ್ನು ಗ್ಯಾರಂಟಿಗಳಿಗೆ ಬಳಸಿದ್ದನ್ನು ನೀವೇ ಸ್ವತಃ ನಿಂತು ಸಮರ್ಥಿಸಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.