ಚಿಕ್ಕಮಗಳೂರು, ಜೂ. 16 (DaijiworldNews/TA): ಕನ್ನಡ ಸಾಹಿತ್ಯ ಪರಿಷತ್ ಎಂದರೆ ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿಯ ಚಟುವಟಿಕೆಗಳೆಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಆದರೆ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ತನ್ನ ಮಾನವೀಯ ಕಾರ್ಯದ ಮೂಲಕ ಇದೀಗ ಇಡೀ ರಾಜ್ಯದ ಗಮನ ಸೆಳೆದಿದೆ.

ಹೃದಯ ಸಂಬಂಧಿ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ 25 ಬಡ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಿ, ಅವರ ಬದುಕಿಗೆ ಹೊಸ ಆಶಾಕಿರಣವಾಗಿರುವ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರಿನ ವೈದೇಹಿ ಆಸ್ಪತ್ರೆಯ ಸಹಯೋಗದೊಂದಿಗೆ ಕಳೆದ ಮೇ 14ರಂದು ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. ಖ್ಯಾತ ಮಕ್ಕಳ ಹೃದ್ರೋಗ ತಜ್ಞ ಡಾ. ಗೋವಿಂದರಾಜ್ ನೇತೃತ್ವದ ವೈದ್ಯರ ತಂಡ ಮಕ್ಕಳ ಆರೋಗ್ಯ ತಪಾಸಣೆ ನಡೆಸಿತ್ತು.
ಈ ವೇಳೆ 9 ತಿಂಗಳ ಹಸುಗೂಸಿನಿಂದ 14 ವರ್ಷದೊಳಗಿನ ಒಟ್ಟು 25 ಮಕ್ಕಳಿಗೆ ತುರ್ತು ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದು ಪತ್ತೆಯಾಯಿತು. ಮಕ್ಕಳ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದ ಕಸಾಪ, ಎಲ್ಲರಿಗೂ ಉಚಿತ ಚಿಕಿತ್ಸೆಯ ವ್ಯವಸ್ಥೆ ಕಲ್ಪಿಸುವ ನಿರ್ಧಾರ ಕೈಗೊಂಡಿತು. ಅದರಂತೆ, ಎಲ್ಲಾ ಮಕ್ಕಳಿಗೂ ಸಂಪೂರ್ಣ ಉಚಿತವಾಗಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತಿದೆ. ಇದಲ್ಲದೆ, ಚಿಕ್ಕಮಗಳೂರಿನಿಂದ ಬೆಂಗಳೂರಿನವರೆಗೆ ಮಕ್ಕಳ ಹಾಗೂ ಪೋಷಕರ ಪ್ರಯಾಣಕ್ಕಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅವಧಿಯಲ್ಲೂ ಮಕ್ಕಳ ಮತ್ತು ಪೋಷಕರ ಊಟ, ವಸತಿ ಹಾಗೂ ಇತರೆ ಅಗತ್ಯ ಸೌಲಭ್ಯಗಳ ವೆಚ್ಚವನ್ನು ಸಹ ಸಂಪೂರ್ಣವಾಗಿ ಭರಿಸಲಾಗಿದೆ. ಹೀಗಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಇದು ದೊಡ್ಡ ನೆರವಾಗಿದೆ.
“ನಮ್ಮ ಮಗುವಿನ ಹೃದಯ ಶಸ್ತ್ರಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಬೇಕು ಎಂದು ವೈದ್ಯರು ಹೇಳಿದಾಗ ನಾವು ದಿಕ್ಕುತೋಚದ ಸ್ಥಿತಿಯಲ್ಲಿದ್ದೆವು. ಆದರೆ ಕನ್ನಡ ಸಾಹಿತ್ಯ ಪರಿಷತ್ ನಮ್ಮ ನೆರವಿಗೆ ಬಂದು ಚಿಕಿತ್ಸೆ, ಪ್ರಯಾಣ, ಊಟ ಹಾಗೂ ವಸತಿ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಉಚಿತವಾಗಿ ಮಾಡಿಕೊಟ್ಟಿದೆ. ನಮ್ಮ ಮಗುವಿನ ಜೀವ ಉಳಿಸಿರುವ ಈ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ” ಎಂದು ಆಶಾ ಎಂಬ ಪೋಷಕಿ ಭಾವುಕರಾಗಿ ತಿಳಿಸಿದ್ದಾರೆ. ಸಾಹಿತ್ಯ ಸೇವೆಯೊಂದಿಗೆ ಸಾಮಾಜಿಕ ಕಳಕಳಿಯನ್ನು ಮೆರೆದಿರುವ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಈ ಕಾರ್ಯಕ್ಕೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.