ಬೆಂಗಳೂರು, ಜೂ. 16 (DaijiworldNews/TA): ರಾಜಧಾನಿ ಬೆಂಗಳೂರಿನಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ಮತ್ತೆ ಮರುಕಳಿಸಿದ್ದು, ಈ ಬಾರಿ ನಗರದ ವಿವಿಧ ಪ್ರಾದೇಶಿಕ ಸಾರಿಗೆ ಕಚೇರಿಗಳು (ಆರ್ಟಿಒ) ಕಿಡಿಗೇಡಿಗಳ ಗುರಿಯಾಗಿವೆ. ನಗರದ ಹಲವು ಆರ್ಟಿಒ ಕಚೇರಿಗಳಿಗೆ ಏಕಕಾಲದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಕಸ್ತೂರಿನಗರ, ಜ್ಞಾನಭಾರತಿ, ತಲಘಟ್ಟಪುರ, ಎಚ್ಎಸ್ಆರ್ ಲೇಔಟ್ ಸೇರಿದಂತೆ ನಗರದ ಪ್ರಮುಖ ಆರ್ಟಿಒ ಕಚೇರಿಗಳಿಗೆ ಈ ಬೆದರಿಕೆ ಸಂದೇಶ ರವಾನೆಯಾಗಿತ್ತು. ಇದರಿಂದ ಕಚೇರಿ ಸಿಬ್ಬಂದಿ ಹಾಗೂ ಸೇವೆಗಾಗಿ ಆಗಮಿಸಿದ್ದ ಸಾರ್ವಜನಿಕರಲ್ಲಿ ಗೊಂದಲ ಮತ್ತು ಭಯದ ವಾತಾವರಣ ಉಂಟಾಯಿತು.
ಬೆದರಿಕೆ ಇಮೇಲ್ ಬಂದ ತಕ್ಷಣ ಆರ್ಟಿಒ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಮೇಲ್ನಲ್ಲಿ ಮಧ್ಯಾಹ್ನ 1.30 ಗಂಟೆಗೆ ಕಚೇರಿಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಉಲ್ಲೇಖಿಸಲಾಗಿತ್ತು. ವಿಷಯದ ಗಂಭೀರತೆಯನ್ನು ಮನಗಂಡ ಪೊಲೀಸರು ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ ಕೂಡಲೇ ಸ್ಥಳಗಳಿಗೆ ಧಾವಿಸಿ ತಪಾಸಣೆ ಆರಂಭಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಕಚೇರಿಯಲ್ಲಿದ್ದ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಬಳಿಕ ಕಚೇರಿ ಆವರಣವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದು ಮೂಲೆ ಮೂಲೆಗಳನ್ನೂ ಪರಿಶೀಲಿಸಲಾಯಿತು. ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸುದೀರ್ಘ ತಪಾಸಣೆಯ ವೇಳೆ ಯಾವುದೇ ಸ್ಫೋಟಕ ವಸ್ತು ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದರಿಂದ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿದೆ.
ಪೊಲೀಸರು ಎಲ್ಲಾ ಕಚೇರಿಗಳು ಸುರಕ್ಷಿತವಾಗಿವೆ ಎಂದು ಸ್ಪಷ್ಟಪಡಿಸಿದ ಬಳಿಕ ಸಿಬ್ಬಂದಿ ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಈ ಬೆದರಿಕೆ ಇಮೇಲ್ ಎಲ್ಲಿಂದ ಬಂದಿದೆ ಹಾಗೂ ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಪೊಲೀಸರ ಸಹಕಾರದೊಂದಿಗೆ ತನಿಖೆ ಮುಂದುವರಿದಿದೆ.