ಮುಂಬೈ, ಜೂ. 16 (DaijiworldNews/AA): ವಿರೋಧ ಪಕ್ಷಗಳ ಆಮಿಷ ಅಥವಾ ಒತ್ತಡಕ್ಕೆ ಮಣಿಯುವವರಿಗೆ ಶಿವಸೇನೆಯಲ್ಲಿ ಜಾಗವಿಲ್ಲ ಎಂದು ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಪಕ್ಷದ ಸಂಸದರು ಮತ್ತು ಪದಾಧಿಕಾರಿಗಳ ಹೈ-ವೋಲ್ಟೇಜ್ ಸಭೆಯಲ್ಲಿ ಮಾತನಾಡಿದ ಅವರು, "ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಶಕ್ತಿಯೇ ತಮಗೆ ಮುಖ್ಯ. ಶಿವಸೇನೆ ಎಂದಿಗೂ ದ್ರೋಹಿಗಳಿಗೆ ಮಣಿದಿಲ್ಲ, ಮುಂದೆಯೂ ಮಣಿಯುವುದಿಲ್ಲ. ನಮ್ಮ ಪಕ್ಷದ ಚಿಹ್ನೆ ಮತ್ತು ಹೆಸರನ್ನು ಕದ್ದವರು ಈಗ ನಮ್ಮ ಸಂಸದರನ್ನು ಕದಿಯಲು ಆಪರೇಷನ್ ಟೈಗರ್ ಎಂಬ ನಾಟಕವಾಡುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
"ನಾನು ಯಾರನ್ನೂ ಕಟ್ಟಿ ಹಾಕುವುದಿಲ್ಲ. ಯಾರಿಗೆ ಪಕ್ಷ ಬಿಟ್ಟು ಹೋಗಬೇಕೋ, ಅವರು ಧೈರ್ಯವಾಗಿ ಹೋಗಬಹುದು. ನಾವು ಯಾರನ್ನೂ ಹಿಡಿದಿಟ್ಟುಕೊಂಡಿಲ್ಲ. ಆದರೆ ನೆನಪಿರಲಿ, ಹೋದವರಿಗೆ ಮಹಾರಾಷ್ಟ್ರದ ಜನತೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ನಿಜವಾದ ಹುಲಿಗಳು ನನ್ನೊಂದಿಗಿವೆ" ಎಂದು ಕಿಡಿಕಾರಿದ್ದಾರೆ.