ಚೆನ್ನೈ, ಜೂ. 16 (DaijiworldNews/AK): ಹಲವು ಗ್ಯಾರಂಟಿ ಜಾರಿ ಮಾಡಿ ಅಧಿಕಾರಕ್ಕೆ ಏರಿರುವ ವಿಜಯ್ ಸರ್ಕಾರ ಈಗ ತಮಿಳುನಾಡು ರಾಜ್ಯದ ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ಶ್ವೇತಪತ್ರ ಬಿಡುಗಡೆ ಮಾಡಿದೆ.

ರಾಜ್ಯದ ಒಟ್ಟು ಹಣಕಾಸು ಸಾಲ 13.18 ಲಕ್ಷ ಕೋಟಿ ರೂ. ಗೆ ಏರಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರ ಬಿಡುಗಡೆ ಮಾಡಿರುವ ಶ್ವೇತಪತ್ರದ ಅನುಸಾರ, ರಾಜ್ಯದ ನೇರ ಸಾಲದ ಮೊತ್ತ ಈಗ ಸುಮಾರು 10 ಲಕ್ಷ ಕೋಟಿ ರೂ.ಗೆ ತಲುಪಿದೆ. ಐದು ವರ್ಷಗಳ ಹಿಂದೆ ಈ ಮೊತ್ತ ಸುಮಾರು 4.8 ಲಕ್ಷ ಕೋಟಿ ರೂ. ಇತ್ತು. ಕಳೆದ ಐದು ವರ್ಷಗಳಲ್ಲಿ ಸಾಲದ ಪ್ರಮಾಣ ಬಹುತೇಕ ದ್ವಿಗುಣಗೊಂಡಿದೆ.
ಸಾಲದ ಹೊರೆ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ, ತಮಿಳುನಾಡಿನಲ್ಲಿ ಜನಿಸುವ ಪ್ರತಿಯೊಂದು ಮಗುವಿನ ಮೇಲೂ ಸರಾಸರಿ 1.28 ಲಕ್ಷ ರೂ. ಸಾಲದ ಹೊರೆ ಇದೆ. ನೇರ ಸಾಲದ ಜೊತೆಗೆ, ಸರ್ಕಾರದ ಖಾತೆ ಹೊರಗಿನ ಸಾಲಗಳು, ಗ್ಯಾರಂಟಿಗಳು ಮತ್ತು ಇತರೆ ಹಣಕಾಸು ಬಾಧ್ಯತೆಗಳನ್ನು ಸೇರಿಸಿದರೆ ರಾಜ್ಯದ ಒಟ್ಟು ಹೊರೆ 13.18 ಲಕ್ಷ ಕೋಟಿ ರೂ.ಗೆ ತಲುಪುತ್ತದೆ ಎಂದು ಅಂದಾಜಿಸಲಾಗಿದೆ.