ನವದೆಹಲಿ, ಸೆ 02 (DaijiworldNews/SM): 370ನೇ ವಿಧಿಯನ್ನು ರದ್ದು ಪಡಿಸಿದ ಬಳಿಕ ಒಂದಲ್ಲ ಒಂದು ರೀತಿಯಲ್ಲಿ ಪಾಕಿಸ್ತಾನ ಭಾರತದ ಕಾಲೆಳೆಯುತ್ತಿದೆ.
ಪಾಕಿಸ್ತಾನದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ, ಭಾರತ ನೌಕಾ ಸೇನೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ರನ್ನು ಸೋಮವಾರದಂದು ಭಾರತದ ಡೆಪ್ಯೂಟಿ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಭೇಟಿಯಾಗಿದ್ದಾರೆ. ಈ ವೇಳೆ ಕುಲಭೂಷಣ್ ತೀವ್ರ ಒತ್ತಡದಲ್ಲಿರುವುದು ತಿಳಿದು ಬಂದಿದೆ. ಪಾಖಿಸ್ತಾನ ಸುಳ್ಳು ಹೇಳಿಕೆಗಳ ಮೂಲಕ ಕುಲಭೂಷಣ್ ಅವರ ಮೇಲೆ ಒತ್ತಡವನ್ನು ಹೇರುತ್ತಿರುವುದು ತಿಳಿದು ಬಂದಿದೆ.
"ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲದಂಥ ಆರೋಪಗಳನ್ನು ಅವರ ಮೇಲೆ ಹೊರೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಕುಲಭೂಷಣ್ ಜಾಧವ್ ನಿಂದ ಸುಳ್ಳಾದ ತಪ್ಪೊಪ್ಪಿಗೆ ಹೇಳಿಕೆ ಕೊಡಿಸಿರುವ ಪಾಕಿಸ್ತಾನದ ಸುಪರ್ದಿಯಲ್ಲಿ ಜಾಧವ್ ವಿಪರೀತ ಒತ್ತಡದಲ್ಲಿ ಇದ್ದಾರೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ಹೇಳಿದೆ.
ಇದೇ ವೇಳೆ ವಿದೇಶಾಂಗ ಸಚಿವರಾದ ಎಸ್. ಜಯಶಂಕರ್ ಅವರು ಕುಲಭೂಷಣ್ ಜಾಧವ್ ಅವರ ತಾಯಿ ಜತೆಗೆ ಮಾತನಾಡಿದ್ದಾರೆ. ಹಾಗೂ ಸೋಮವಾರದಂದು ನಡೆದ ಬೆಳವಣಿಗೆ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದಾರೆ.