ಲಕ್ನೋ, ಜೂ. 17 (DaijiworldNews/AK): ಜೂನ್ 21 ರಂದು ನಡೆಯಲಿರುವ ನೀಟ್-ಯುಜಿ ಮರುಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳ ಬಸ್ ಪ್ರಯಾಣದ ದರದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.
>
ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆ ಇಂದು ಪೂರ್ವ ಸಿದ್ಧತೆಗಳನ್ನ ಪರಿಶೀಲಿಸಿದರು. ಬಳಿಕ ಮಾತನಾಡಿ, ನೀಟ್-ಯುಜಿ ಮರುಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳ ಬಸ್ ಪ್ರಯಾಣದ ದರದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡುವುದಾಗಿ ತಿಳಿಸಿದರು.
ನಂತರ ಯೋಗ ದಿನಾಚರಣೆ ಕುರಿತು ಮಾತನಾಡಿ, ರಾಜ್ಯದ ಎಲ್ಲಾ 57,000 ಗ್ರಾಮ ಪಂಚಾಯಿತಿಗಳು ಹಾಗೂ 762 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಬಾರಿ ಯೋಗ ದಿನವನ್ನು `ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ’ ಎಂಬ ವಸ್ತುವಿಷಯದ ಅಡಿಯಲ್ಲಿ ಆಚರಿಸಲಾಗುತ್ತಿದೆ ಎಂದರು.
ಅಮೃತ ಸರೋವರಗಳು ಹಾಗೂ ಐತಿಹಾಸಿಕ ಸ್ಥಳಗಳಲ್ಲಿ ದೊಡ್ಡ ಮಟ್ಟದಲ್ಲಿ ಸಾಮೂಹಿಕ ಯೋಗದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಜೂನ್ 26 ರಂದು ಆಚರಿಸಲಾಗುವ ಮುಸಲ್ಮಾನರ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಕೆಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಮೊಹರಂ ಹಬ್ಬವನ್ನ ಗಾಂಭಿರ್ಯ ಮತ್ತು ಶಿಸ್ತಿನಿಂದ ಆಚರಿಸಬೇಕು. ಮೊಹರಂ ಎನ್ನುವುದು ಶೋಕಾಚರಣೆಯ ಸಂದರ್ಭವೇ ಹೊರತು, ಶಕ್ತಿ ಪ್ರದರ್ಶನ ಮಾಡುವ ಸಮಯವಲ್ಲ. ಜೋರಾಗಿ ಡಿಜೆ ಹಾಕುವಂತಿಲ್ಲ. ಮಾರ್ಗಸೂಚಿಯಲ್ಲಿ ತಿಳಿಸಿರುವ ಎಲ್ಲಾ ವಿಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದ್ದಾರೆ.