ಹೈದರಾಬಾದ್, ಜೂ. 17 (DaijiworldNews/AA): ಜಾಗತಿಕ ಐಟಿ ಮತ್ತು ಹೂಡಿಕೆ ಹಬ್ ಆಗಿ ಬೆಳೆಯುತ್ತಿರುವ ಹೈದರಾಬಾದ್ನ ರಸ್ತೆಯೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಿಡಲು ತೆಲಂಗಾಣದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಆದರೆ ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ರಾಜಕೀಯ ವಿರೋಧ ವ್ಯಕ್ತವಾಗಿದೆ.

ಹೈದರಾಬಾದ್ನ ಐಟಿ ಕಾರಿಡಾರ್ನಲ್ಲಿರುವ ಅಮೆರಿಕನ್ ಕಾನ್ಸುಲೇಟ್ಗೆ (ಅಮೆರಿಕ ರಾಯಭಾರ ಕಚೇರಿ) ಸಂಪರ್ಕ ಕಲ್ಪಿಸುವ ರಸ್ತೆಗೆ 'ಡೊನಾಲ್ಡ್ ಟ್ರಂಪ್ ಅವೆನ್ಯೂ' ಎಂದು ಹೆಸರಿಡಲು ಸಿಎಂ ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ಸರ್ಕಾರ ತೀರ್ಮಾನಿಸಿದೆ. ಜುಲೈ 4ರ ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಗೆ ಕೆಲವು ದಿನಗಳ ಮುಂಚಿತವಾಗಿ, ಅಂದರೆ ಜೂನ್ 23 ರಂದು ಸಿಎಂ ರೇವಂತ್ ರೆಡ್ಡಿ ಅವರು ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರ ಸಮ್ಮುಖದಲ್ಲಿ ಈ ರಸ್ತೆಯನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲಿದ್ದಾರೆ.
ತೆಲಂಗಾಣ ಮತ್ತು ಅಮೆರಿಕ ನಡುವಿನ ವ್ಯಾಪಾರ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರಿ ಮೂಲಗಳಿಂದ ತಿಳಿದುಬಂದಿದೆ. ಆದರೆ ತೆಲಂಗಾಣ ಸರ್ಕಾರದ ಈ ನಡೆಗೆ ಪರ- ವಿರೋಧ ವ್ಯಕ್ತವಾಗಿದೆ.
ಸರ್ಕಾರದ ಈ ತೀರ್ಮಾನವನ್ನು ಖಂಡಿಸಿರುವ ಸಿಪಿಐ(ಎಂ) ಹಿರಿಯ ನಾಯಕಿ ಎಂ.ಎ. ಬೇಬಿ ಅವರು, "ಇಂದು ಇರಾನ್ ಬಿಕ್ಕಟ್ಟು, ಗಾಜಾ ಮಾರಣಹೋಮ ಮತ್ತು ವೆನೆಜುವೆಲಾದಲ್ಲಿ ಅಮೆರಿಕದ ದೌರ್ಜನ್ಯ ಮುಂದುವರೆದಿದೆ. ಇತ್ತೀಚೆಗಷ್ಟೇ ಅಮೆರಿಕದ ದಾಳಿಗೆ ಮೂವರು ಭಾರತೀಯ ನಾವಿಕರು ಬಲಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನಮ್ಮ ಕಾಲದ ಹಿಟ್ಲರ್ನಂತಿರುವ ಡೊನಾಲ್ಡ್ ಟ್ರಂಪ್ ಹೆಸರನ್ನು ರಸ್ತೆಗೆ ಇಡುತ್ತಿರುವುದು ಭಾರತದ ಸಾರ್ವಭೌಮತ್ವ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತರುವಂತಹದ್ದು. ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯುವಂತೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಬೇಕು" ಎಂದು ಒತ್ತಾಯಿಸಿದ್ದಾರೆ.