ಬೆಂಗಳೂರು, ಜೂ. 17 (DaijiworldNews/TA): ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆಗಳು ಜೋರಾಗಿರುವ ನಡುವೆಯೇ ಜಮೀರ್ ಅಹ್ಮದ್ ಸಚಿವ ಸ್ಥಾನ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ತಾವು ಸಂಪೂರ್ಣ ಬದ್ಧರಾಗಿರುವುದಾಗಿ ಅವರು ಹೇಳಿದ್ದಾರೆ.

ಸಚಿವ ಸ್ಥಾನದ ನಿರೀಕ್ಷೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜಮೀರ್ ಅಹ್ಮದ್, ತಾವು ಯಾವುದೇ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಅಭಿಮಾನಿಗಳು ಹಾಗೂ ಬೆಂಬಲಿಗರು ತಮ್ಮ ಪರವಾಗಿ ಪ್ರತಿಭಟನೆ ನಡೆಸುವುದು ಸಹಜ. ಆದರೆ, ಅದನ್ನು ತಮ್ಮ ವೈಯಕ್ತಿಕ ಬೇಡಿಕೆಯಾಗಿ ಪರಿಗಣಿಸಬಾರದು ಎಂದರು.
"ನನಗೆ ಸಚಿವ ಸ್ಥಾನ ಸಿಗದಿದ್ದರೂ ಯಾವುದೇ ಸಮಸ್ಯೆ ಇಲ್ಲ. ಪಕ್ಷದ ಹೈಕಮಾಂಡ್ ಹಾಗೂ ನಾಯಕತ್ವ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ಅದನ್ನು ಗೌರವದಿಂದ ಸ್ವೀಕರಿಸುತ್ತೇನೆ" ಎಂದು ಅವರು ಹೇಳಿದರು. ಇತ್ತೀಚೆಗೆ ಕಾಂಗ್ರೆಸ್ ನಾಯಕ ಡಿ.ಕೆ. ಸುರೇಶ್ ಅವರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, ತಮ್ಮ ಭೇಟಿಗೆ ಯಾವುದೇ ವಿಶೇಷ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
"ನಾನು ಡಿ.ಕೆ. ಸುರೇಶ್ ಅವರನ್ನು ಭೇಟಿ ಮಾಡುವುದು ಹೊಸದೇನಲ್ಲ. ಹಲವು ವರ್ಷಗಳಿಂದ ನಮ್ಮ ನಡುವೆ ಆತ್ಮೀಯ ಸ್ನೇಹವಿದೆ. ನಾವು ತಿಂಗಳಿಗೆ ಮೂರು-ನಾಲ್ಕು ಬಾರಿ ಭೇಟಿಯಾಗುತ್ತೇವೆ. ನಾನು ಬೆಂಗಳೂರಿನ ಕ್ವಾರ್ಟರ್ಸ್ನಲ್ಲಿದ್ದರೆ ಅವರು ಬರುತ್ತಾರೆ, ಅವರು ಮನೆಯಲ್ಲಿದ್ದರೆ ನಾನು ಹೋಗಿ ಭೇಟಿ ಮಾಡುತ್ತೇನೆ. ಇದು ಸಾಮಾನ್ಯ ಸ್ನೇಹಪೂರ್ವಕ ಭೇಟಿ ಅಷ್ಟೇ" ಎಂದು ಹೇಳಿದರು. ಸಚಿವ ಸಂಪುಟ ವಿಸ್ತರಣೆ ಕುರಿತು ರಾಜಕೀಯ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಜಮೀರ್ ಅಹ್ಮದ್ ಅವರ ಈ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ಗಮನ ಸೆಳೆದಿದೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂಬ ಸಂದೇಶವನ್ನು ಅವರು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.