ಪಾಟ್ನಾ, ಜೂ. 17 (DaijiworldNews/TA): ಬಿಹಾರದ ರಾಜಧಾನಿ ಪಾಟ್ನಾದ ಇತಿಹಾಸವನ್ನು ನೆನಪಿಸುವ ಮಹತ್ವದ ಘೋಷಣೆಯೊಂದನ್ನು ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮಾಡಿದ್ದಾರೆ. ಪಾಟ್ನಾದಲ್ಲಿ ನಿರ್ಮಾಣವಾಗಲಿರುವ ಹೊಸ ಉಪನಗರಕ್ಕೆ ಪ್ರಾಚೀನ ಹೆಸರಾದ ‘ಪಾಟಲಿಪುತ್ರ’ ಎಂದು ನಾಮಕರಣ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪಾಟ್ನಾ ನಗರವು ಭಾರತದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಮೌರ್ಯ ಮತ್ತು ಗುಪ್ತ ಸಾಮ್ರಾಜ್ಯಗಳ ರಾಜಧಾನಿಯಾಗಿದ್ದ ಈ ನಗರವನ್ನು ಪ್ರಾಚೀನ ಕಾಲದಲ್ಲಿ ‘ಪಾಟಲಿಪುತ್ರ’ ಎಂದು ಕರೆಯಲಾಗುತ್ತಿತ್ತು. ಹೀಗಾಗಿ ಪಾಟ್ನಾಗೆ ಮತ್ತೆ ಅದರ ಐತಿಹಾಸಿಕ ಹೆಸರನ್ನು ನೀಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ.
ಬಿಹಾರದ ಹಲವು ಬಿಜೆಪಿ ನಾಯಕರು ಮತ್ತು ಹಿಂದೂಪರ ಸಂಘಟನೆಗಳು ಪಾಟ್ನಾ ಸೇರಿದಂತೆ ಕೆಲವು ನಗರಗಳ ಹೆಸರನ್ನು ಐತಿಹಾಸಿಕ ಹೆಸರಿಗೆ ಬದಲಾಯಿಸಬೇಕು ಎಂದು ಆಗಾಗ ಒತ್ತಾಯಿಸುತ್ತಾ ಬಂದಿವೆ. ಉತ್ತರ ಪ್ರದೇಶದಲ್ಲಿ ಅಲಹಾಬಾದ್ ನಗರವನ್ನು ‘ಪ್ರಯಾಗ್ರಾಜ್’ ಎಂದು ಮರುನಾಮಕರಣ ಮಾಡಿದ ಮಾದರಿಯಲ್ಲಿ ಬಿಹಾರದಲ್ಲೂ ಕ್ರಮ ಕೈಗೊಳ್ಳಬೇಕು ಎಂಬುದು ಅವರ ವಾದವಾಗಿದೆ. ಆದರೆ, ಪಾಟ್ನಾ ನಗರದ ಹೆಸರನ್ನು ಅಧಿಕೃತವಾಗಿ ಬದಲಾಯಿಸುವ ಬಗ್ಗೆ ರಾಜ್ಯ ಅಥವಾ ಕೇಂದ್ರ ಸರ್ಕಾರ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಯಾವುದೇ ನಗರದ ಹೆಸರು ಬದಲಾವಣೆ ಮಾಡಲು ಮೊದಲು ರಾಜ್ಯ ಸಚಿವ ಸಂಪುಟದಲ್ಲಿ ಪ್ರಸ್ತಾವನೆ ಅಂಗೀಕಾರವಾಗಬೇಕು. ನಂತರ ಅದನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಬೇಕು. ರೈಲ್ವೆ ಇಲಾಖೆ, ಅಂಚೆ ಇಲಾಖೆ, ಸರ್ವೇ ಆಫ್ ಇಂಡಿಯಾ ಸೇರಿದಂತೆ ವಿವಿಧ ಕೇಂದ್ರ ಸಂಸ್ಥೆಗಳಿಂದ ಅನುಮೋದನೆ ದೊರೆತ ಬಳಿಕವೇ ಹೆಸರು ಅಧಿಕೃತವಾಗಿ ಬದಲಾಗುತ್ತದೆ. ಹೀಗಾಗಿ ಸದ್ಯಕ್ಕೆ ಪಾಟ್ನಾ ನಗರದ ಹೆಸರು ಬದಲಾವಣೆಯ ಬಗ್ಗೆ ಯಾವುದೇ ಅಧಿಕೃತ ಪ್ರಕ್ರಿಯೆ ಆರಂಭವಾಗಿಲ್ಲ.
‘ಪಾಟಲಿಪುತ್ರ’ದ ಐತಿಹಾಸಿಕ ಮಹತ್ವ : ‘ಪಾಟಲಿಪುತ್ರ’ ಭಾರತದ ಇತಿಹಾಸದ ಅತ್ಯಂತ ಪ್ರಸಿದ್ಧ ನಗರಗಳಲ್ಲಿ ಒಂದಾಗಿದೆ. ಆರಂಭದಲ್ಲಿ ‘ಪಾಟಲಿಗ್ರಾಮ’ ಎಂದು ಕರೆಯಲ್ಪಡುತ್ತಿದ್ದ ಈ ಪ್ರದೇಶ, ನಂತರ ಬೆಳೆಯುತ್ತಾ ಪಾಟಲಿಪುತ್ರವಾಗಿ ರೂಪುಗೊಂಡಿತು. ಶತಮಾನಗಳ ಇತಿಹಾಸದ ಹಾದಿಯಲ್ಲಿ ಹೆಸರು ಬದಲಾವಣೆಗೊಂಡು ಇಂದಿನ ‘ಪಾಟ್ನಾ’ ಆಗಿದೆ. ಸುಮಾರು 3,000 ವರ್ಷಗಳ ಇತಿಹಾಸ ಹೊಂದಿರುವ ಈ ನಗರವು ಒಂದು ಕಾಲದಲ್ಲಿ ರಾಜಕೀಯ, ವ್ಯಾಪಾರ ಮತ್ತು ಶಿಕ್ಷಣದ ಪ್ರಮುಖ ಕೇಂದ್ರವಾಗಿತ್ತು. ಚಂದ್ರಗುಪ್ತ ಮೌರ್ಯ, ಬಿಂದುಸಾರ ಹಾಗೂ ಸಾಮ್ರಾಟ್ ಅಶೋಕನಂತಹ ಮಹಾನ್ ಆಡಳಿತಗಾರರು ಇದೇ ನೆಲೆಯಿಂದ ಭಾರತೀಯ ಉಪಖಂಡದ ಬಹುಭಾಗವನ್ನು ಆಳಿದ್ದರು.
ಸಾಮ್ರಾಟ್ ಚೌಧರಿ ಅವರ ಘೋಷಣೆಯ ಪ್ರಕಾರ, ಪಾಟ್ನಾದಲ್ಲಿ ನಿರ್ಮಾಣವಾಗಲಿರುವ ಹೊಸ ಉಪನಗರಕ್ಕೆ ‘ಪಾಟಲಿಪುತ್ರ’ ಎಂದು ಹೆಸರು ಇಡಲಾಗುತ್ತದೆ. ಈ ಮೂಲಕ ಬಿಹಾರದ ಐತಿಹಾಸಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಲಾಗುತ್ತಿದೆ. ಈ ಘೋಷಣೆ ಬಳಿಕ ಪಾಟ್ನಾ ನಗರದ ಹೆಸರನ್ನು ಸಂಪೂರ್ಣವಾಗಿ ‘ಪಾಟಲಿಪುತ್ರ’ ಎಂದು ಬದಲಾಯಿಸುವ ಚರ್ಚೆಯೂ ಮತ್ತೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.