ದಾವಣಗೆರೆ, ಜೂ. 17 (DaijiworldNews/AA): ಸಹಶಿಕ್ಷಕರು ಹಾಗೂ ಅಡುಗೆ ಕೆಲಸದವರೊಂದಿಗೆ ಜಗಳವಾಡಿ ನೊಂದು ಶಾಲೆಯಲ್ಲೇ ವಿಷ ಸೇವಿಸಿದ್ದ ಮುಖ್ಯ ಶಿಕ್ಷಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಆಘಾತಕಾರಿ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದಲ್ಲಿ ಬುಧವಾರ ನಡೆದಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಯಪ್ಪ(55) ಆತ್ಮಹತ್ಯೆಗೆ ಶರಣಾದವರು.
ಕಳೆದ ಕೆಲ ದಿನಗಳಿಂದ ಶಾಲೆಯಲ್ಲಿ ಒಳಜಗಳ ನಡೆಯುತ್ತಲೇ ಇತ್ತು. ಮಂಗಳವಾರ ಎಸ್ಡಿಎಂಸಿ ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಲಾಗಿತ್ತು. ಈ ಸಭೆ ವೇಳೆ, ಮುಖ್ಯ ಶಿಕ್ಷಕ ಜಯಪ್ಪ ಅವರು ಎದ್ದು ಶೌಚಾಲಯಕ್ಕೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥರಾಗಿದ್ದ ಜಯಪ್ಪ ಅವರನ್ನು ಸ್ಥಳೀಯರು, ಶಿಕ್ಷಕರು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಪ್ಪ ಅವರು ಬುಧವಾರ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.