ಬೆಂಗಳೂರು, ಜೂ. 17 (DaijiworldNews/AA): ಬೇರೆಯವರ ಖಾಸಗಿ ಚಿತ್ರ ವೈರಲ್ ಮಾಡುವವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ.

ಬೇರೆಯವರ ಖಾಸಗಿ ಚಿತ್ರ, ವಿಡಿಯೋ ವೈರಲ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಗೃಹ ಇಲಾಖೆ ಮುಂದಾಗಿದೆ. ಈ ಸಂಬಂಧ ಆದೇಶ ಹೊರಡಿಸಿರುವ ಡಿಜಿ-ಐಜಿಪಿ, ಸಂತ್ರಸ್ತರು ಮೊದಲು ಖಾಸಗಿ ದೃಶ್ಯ ಚಿತ್ರೀಕರಣಕ್ಕೆ ಒಪ್ಪಿದ್ದರು ಎಂದ ಮಾತ್ರಕ್ಕೆ ಇಂತ ಕಾರಣ ಕೊಟ್ಟು ದೂರು ಸ್ವೀಕರಿಸದೇ ಇರಬಾರದು. ಚಿತ್ರೀಕರಣದ ಒಪ್ಪಿಗೆಗೂ ಮತ್ತು ಹಂಚಿಕೆ ಅಥವಾ ಪ್ರಸಾರದ ಒಪ್ಪಿಗೆಗೂ ವ್ಯತ್ಯಾಸವಿದೆ. ಇದು ಕಾನೂನು ಪ್ರಕಾರ ಕಾಗ್ನಿಜೆನ್ಸ್ ಅಪರಾಧವಾಗುತ್ತದೆ. ಹೀಗಾಗಿ ಬೇರೆಯವರ ಖಾಸಗಿ ಚಿತ್ರ ವೈರಲ್ ಮಾಡುವವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿದ್ದಾರೆ.
ಖಾಸಗಿ ವಿಷಯಗಳನ್ನು ಬಳಸಿಕೊಂಡು ಹಣ, ಲೈಂಗಿಕ ಅನುಕೂಲ ಅಥವಾ ಬೇರೆ ಲಾಭಕ್ಕಾಗಿ ಬೆದರಿಕೆ, ಸುಲಿಕೆ ನಡೆಸುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಮಹತ್ವದ ಆದೇಶ ಹೊರಡಿಸಲಾಗಿದೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಬಿಎನ್ಎಸ್ -2023ರ ಅಡಿಯಲ್ಲಿ ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ ಸಂಬಂಧಿತ ಸೆಕ್ಷನ್ ಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ದಾಖಲು ಮಾಡಬೇಕು ಎಂದು ನಿರ್ದೇಶಿಸಲಾಗಿದೆ.
ಇಂತಹ ಪ್ರಕರಣಗಲ್ಲಿ ಎಲ್ಲಾ ಡಿಜಿಟಲ್ ಸಾಕ್ಷ್ಯವನ್ನು ಗೌಪ್ಯವಾಗಿ ಸಂರಕ್ಷಿಸಬೇಕು. ಅಷ್ಟೇ ಅಲ್ಲದೆ, ಸಂತ್ರಸ್ತರ ಗುರುತು ಗೌಪ್ಯವಾಗಿ ಇರುವಂತೆ ನೋಡಿಕೊಳ್ಳಬೇಕಾಗಿದೆ. ಜೊತೆಗೆ ದೂರುದಾರರನ್ನು ಸೂಕ್ಷ್ಮವಾಗಿ ನಡೆಸಿಕೊಳ್ಳುವಂತೆಯೂ ಮಾರ್ಗಸೂಚಿಯಲ್ಲಿ ಉಲ್ಲೇಖ ಮಾಡಲಾಗಿದೆ. ದೂರುದಾರರನ್ನು ಅವಮಾನ ಮಾಡುವುದನ್ನು ತಪ್ಪಿಸಬೇಕು ಹಾಗೂ ಸಂತ್ರಸ್ತೆಯ ದೂರನ್ನು ಮಹಿಳಾ ಅಧಿಕಾರಿಯೇ ದಾಖಲಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 77ರಂತೆ ಗೌಪ್ಯತೆ ಉಲ್ಲಂಘನೆಗೆ ಸಂಬಂಧಿಸಿದ ವಿಧಿಗಳು, ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 66(ಇ), 67 ಮತ್ತು 67(ಎ)ಗಳನ್ನು ಅಳವಡಿಸಬೇಕು ಎಂದು ಸೂಚಿಸಲಾಗಿದೆ. ಮಹಿಳಾ ಸಂತ್ರಸ್ತರಿದ್ದಲ್ಲಿ 77ರ ವಿಧಿಯ ಜೊತೆಗೆ ಐಟಿ ಕಾಯ್ದೆಯ ಸೆಕ್ಷನ್ ಗಳನ್ನು ಸೇರಿಸಿ ಎಫ್ಐಆರ್ ಕಡ್ಡಾಯವಾಗಿ ನೋಂದಣಿ ಮಾಡಬೇಕೆಂದು ಮಾರ್ಗಸೂಚಿಯಲ್ಲಿ ನಿರ್ದೇಶನ ನೀಡಲಾಗಿದೆ.
ಬ್ಲಾಕ್ಮೇಲ್ ವೀಡಿಯೊಗಳು, ಸೆಕ್ಸ್ಟೋರ್ಷನ್, ರಿವೆಂಜ್ ಪೋರ್ನೋಗ್ರಫಿ ಮುಂತಾದ ಪ್ರಕರಣಗಳಲ್ಲಿ ತಕ್ಷಣ ಎಫ್ಐಆರ್ ದಾಖಲಿಸಬೇಕು. ಪೀಡಿತರು ಮೊದಲು ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣಕ್ಕೆ ದೂರು ನಿರಾಕರಿಸಬಾರದು. ಅಪರಾಧ ಸ್ಥಳೀಯ ವ್ಯಾಪ್ತಿಯ ಹೊರಗೆ ನಡೆದಿದ್ದರೆ ಝೀರೋ ಎಫ್ಐಆರ್ ದಾಖಲಿಸಿ ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಪರಾಧ ವಿಷಯವನ್ನು ತಕ್ಷಣ ತೆಗೆದುಹಾಕಲು ಐಟಿ ನಿಯಮಗಳ ಪ್ರಕಾರ ಸಂಬಂಧಿತ ಸಂಸ್ಥೆಗಳಿಗೆ ನೋಟಿಸ್ ನೀಡಬೇಕು ಮತ್ತು ಎಲ್ಲ ಡಿಜಿಟಲ್ ಸಾಕ್ಷ್ಯಗಳನ್ನು ಕಾನೂನುಬದ್ಧವಾಗಿ ಸಂರಕ್ಷಿಸಬೇಕು. ಪೀಡಿತರ ಗುರುತು ಗೌಪ್ಯವಾಗಿರಬೇಕು, ಮಹಿಳಾ ಸಂತ್ರಸ್ತೆಯ ದೂರುಗಳನ್ನು ಮಹಿಳಾ ಅಧಿಕಾರಿಗಳು ದಾಖಲಿಸುವಂತೆ ಸೂಚಿಸಿದ್ದಾರೆ.
ತನಿಖಾಧಿಕಾರಿಗಳು ಸೈಬರ್ ಕ್ರೈಂ ಘಟಕಗಳೊಂದಿಗೆ ಸಮನ್ವಯತೆ ಸಾಧಿಸಿ ತಾಂತ್ರಿಕ ತನಿಖೆ ಹಾಗೂ ಫೋರೆನ್ಸಿಕ್ ವಿಶ್ಲೇಷಣೆ ನಡೆಸಬೇಕು. ಎಫ್ಐಆರ್ ನೋಂದಣಿ ಮಾಡದಿರುವುದು ಅಥವಾ ಪೂರ್ವಾನುಮತಿ ಎಂಬ ತಪ್ಪು ಕಾರಣದಿಂದ ವಿಳಂಬ ಮಾಡಿದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.