ಬೆಂಗಳೂರು, ಜೂ. 17 (DaijiworldNews/AK): ಬಿಡದಿ ಟೌನ್ಶಿಪ್ಗಾಗಿ ರೈತರ ಫಲವತ್ತಾದ ಜಮೀನನ್ನು ಸ್ವಾಧೀನ ಮಾಡುತ್ತೇನೆ ಅಂತ ಮುಖ್ಯಮಂತ್ತಿ ಡಿ ಕೆ ಶಿವಕುಮಾರ್ ಅವರು ಪಟ್ಟು ಹಿಡಿದಿದ್ದಾರೆ. ಬಲವಂತವಾಗಿ ಒಕ್ಕಲೆಬ್ಬಿಸಲು ಹುನ್ನಾರ ನಡೆಸಲಾಗುತ್ತಿದೆ. ಟೌನ್ಶಿಪ್ ಕೈಬಿಟ್ಟು ಅನ್ನದಾತರನ್ನು ಬದುಕಿಸಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಕಷ್ಟಕ್ಕೆ ಮಿಡಿಯಬೇಕಾದ ಸರ್ಕಾರ ಅವರ ಇಚ್ಛೆಗೆ ವಿರುದ್ಧವಾಗಿ ಟೌನ್ಶಿಪ್ ಮಾಡಲು ಹೊರಟಿದೆ. ಇದನ್ನು ವಿರೋಧಿಸುತ್ತೇವೆ ಎಂದರು.
ಟೌನ್ಶಿಪ್ ವ್ಯಾಪ್ತಿಯ ಹಲವಾರು ಭಾಗಗಳಿಗೆ ಭೇಟಿ ನೀಡಿದ್ದೇವೆ. ಎಲ್ಲಾ ಕಡೆ ಕೃಷಿ ಮಾಡಲಾಗುತ್ತಿದೆ. ವಿವಿಧ ಬೆಳೆ ಬೆಳೆಯುತ್ತಿದ್ದಾರೆ. ಒಂದಿಂಚೂ ಬೆಳೆ ಇಲ್ಲದ ಜಾಗ ಸಿಗಲಿಲ್ಲ. ಆದರೆ ಇಂತಹುದನ್ನು ಸರ್ಕಾರ ಬರಡು ಭೂಮಿ ಎಂಬ ಲೇಬಲ್ ಹಚ್ಚಿ ಅವರಿಂದ ಕಸಿಯಲು ಮುಂದಾಗಿದೆ ಎಂದು ದೂರಿದರು.
ಪ್ರತಿ ತಿಂಗಳು ಆರು ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಲಾಗುತ್ತಿದೆ. ರೇಷ್ಮೆ ಬೆಳೆಯುವ 35 ಕೋಟಿ ಬೆಲೆಯ ಜಮೀನು ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ರೇμÉ್ಮ ಗೂಡು ಇರುವ ಮನೆ ಒಡೆದು ಅವನ್ನು ಬಾರ್ ಮಾಡ್ತೀರಾ ಎಂದು ಪ್ರಶ್ನಿಸಿದರು.
ಕೋಟಿ ಕೋಟಿ ಹಣ ತಗೆದುಕೊಂಡು ಇಲ್ಲಿನ ರೈತರು ಎಲ್ಲಿಗೆ ಹೋಗಬೇಕು. ತಲೆಮಾರುಗಳಿಂದ ಕಾಪಾಡಿದ ಆಸ್ತಿ ಕಣ್ಣ ಮುಂದೆ ಹಾಳಾಗುತ್ತಿದೆ ಎಂದು ರೈತರು ಗೋಳಾಡುತ್ತಿದ್ದಾರೆ. ಇಲ್ಲಿ ಯಾರೂ ಸೈಟು ಮಾಡಿ ಅಂತ ಸರ್ಕಾರಕ್ಕೆ ಮನವಿ ಮಾಡಿರಲಿಲ್ಲ. ಈಗ ಅವರು ಆಸ್ತಿ ಕಳೆದುಕೊಂಡು ಬೀದಿ ಪಾಲಾಗಬೇಕಾ ಎಂದರು. ಕನಕಪುರದಲ್ಲಿ ಭಾಷಣ ಮಾಡಿದ ಮುಖ್ಯಮಂತ್ರಿಗಳು ಇಲ್ಲಿ ಜಮೀನಿಗೆ ಚಿನ್ನದ ಬೆಲೆ ಬರುತ್ತೆ ಮಾರಬೇಡಿ ಎಂದು ಕೆಲವು ದಿನಗಳ ಹಿಂದೆ ಹೇಳಿದ್ದರು. ಆದರೆ ಬಿಡದಿ ಜಮೀನು ಏನು ಕಬ್ಬಿಣದ್ದೇ. ಮುಖ್ಯಮಂತ್ರಿಗಳಿಗೆ ತಮ್ಮ ಕ್ಷೇತ್ರದಲ್ಲಿ ಒಂದು ನ್ಯಾಯ ಬೇರೆ ಕಡೆ ಒಂದು ನ್ಯಾಯ ಸರಿಯಲ್ಲ ಎಂದರು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಕೇಂದ್ರ ಸರ್ಕಾರ ಬಂದರು ನಿರ್ಮಿಸಿದರೆ ಪ್ರಕೃತಿ ನಾಶ ಆಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅದಕ್ಕೆ ಡಿ ಕೆ ಶಿವಕುಮಾರ್ ಅವರೂ ಬೆಂಬಲ ನೀಡಿದ್ದಾರೆ. ಆದರೆ ಇಲ್ಲಿ ಪ್ರಕೃತಿ ನಾಶ ಮಾಡಿ ಟೌನ್ಶಿಪ್ ಮಾಡಲು ಸ್ವತಃ ಡಿ ಕೆ ಶಿವಕುಮಾರ್ ಅವರೇ ಮುಂದಾಗಿದ್ದಾರೆ. ಇಂತಹ ದ್ವಿಮುಖ ನೀತಿಯನ್ನು ಡಿಕೆಶಿ ಅವರು ಬಿಡಬೇಕು ಎಂದರು. ಟೌನ್ಶಿಪ್ಗಾಗಿ ಎಚ್ ಡಿ ಕುಮಾರಸ್ವಾಮಿ ಅವರೇ ನೋಟಿಫೈ ಮಾಡಿದ್ರು ಎಂದು ಡಿ ಕೆ ಶಿವಕುಮಾರ್ ಅವರ ಹೇಳಿದ್ದಾರೆ.
ಆದರೆ ಅದನ್ನು ಅವರು ಕೈಬಿಟ್ಟಿದ್ದರು. ಆನಂತರ ಬಂದ ಬಿ ಎಸ್ ಯಡಿಯೂರಪ್ಪ ಅವರೂ ಯೋಜನೆ ಕೈಬಿಟ್ಟರು. ಜಗದೀಶ್ ಶೆಟ್ಟರ್, ಸದಾನಂದ ಗೌಡ ಮತ್ತು ಬಸವರಾಜ ಬೊಮ್ಮಾಯಿ ಅವರೂ ಬೆಂಬಲ ನೀಡಲಿಲ್ಲ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಒತ್ತಾಯವಾಗಿ ರೈತರ ಜಮೀನು ಕಸಿಯಲು ಮುಂದಾಗಿದೆ ಎಂದರು.