ಗುವಾಹಟಿ, ಜೂ. 17 (DaijiworldNews/TA): ಪ್ರಯಾಣದ ವೇಳೆ ಗರ್ಭಿಣಿ ಮಹಿಳೆಯೊಬ್ಬರಿಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಚಲಿಸುತ್ತಿದ್ದ ರೈಲಿನಲ್ಲೇ ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಅಸ್ಸಾಂನಲ್ಲಿ ನಡೆದಿದೆ. ರೈಲ್ವೆ ಸಿಬ್ಬಂದಿ, ವೈದ್ಯಕೀಯ ತಂಡ ಮತ್ತು ರೈಲಿನಲ್ಲಿದ್ದ ನರ್ಸ್ ಅವರ ಸಮಯೋಚಿತ ನೆರವಿನಿಂದ ತಾಯಿ ಮತ್ತು ನವಜಾತ ಶಿಶು ಸುರಕ್ಷಿತರಾಗಿದ್ದಾರೆ.

ಈ ಘಟನೆ ಜೂನ್ 14ರಂದು ಲಾಲ್ಘರ್-ದಿಬ್ರುಗಢ್ ಮಾರ್ಗದಲ್ಲಿ ಸಂಚರಿಸುತ್ತಿದ್ದ 15910 ಅವಧ್ ಅಸ್ಸಾಂ ಎಕ್ಸ್ಪ್ರೆಸ್ ರೈಲಿನಲ್ಲಿ ನಡೆದಿದೆ. ರೈಲು ರಂಗಿಯಾ ರೈಲು ನಿಲ್ದಾಣದ ಸಮೀಪ ತಲುಪುತ್ತಿದ್ದ ವೇಳೆ ಗರ್ಭಿಣಿ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ತಕ್ಷಣವೇ ರಂಗಿಯಾ ನಿಯಂತ್ರಣ ಕೊಠಡಿ, ವಾಣಿಜ್ಯ ಹಾಗೂ ವೈದ್ಯಕೀಯ ವಿಭಾಗಗಳೊಂದಿಗೆ ಸಂಪರ್ಕ ಸಾಧಿಸಿ ತುರ್ತು ವೈದ್ಯಕೀಯ ನೆರವು ವ್ಯವಸ್ಥೆ ಮಾಡಿದ್ದಾರೆ.
ರಂಗಿಯಾ ವಿಭಾಗದ ವಿಭಾಗೀಯ ವೈದ್ಯಾಧಿಕಾರಿ ಡಾ. ಶರತ್ ಚಂದ್ರ ನೇತೃತ್ವದ ವೈದ್ಯಕೀಯ ತಂಡವನ್ನು ಸಜ್ಜುಗೊಳಿಸಿ ರೈಲು ಬರುವ ಮುನ್ನವೇ ನಿಲ್ದಾಣಕ್ಕೆ ಕಳುಹಿಸಲಾಗಿತ್ತು. ಈ ನಡುವೆ ರೈಲಿನಲ್ಲೇ ಪ್ರಯಾಣಿಸುತ್ತಿದ್ದ ಜೋರ್ಹತ್ ಕ್ರಿಶ್ಚಿಯನ್ ಮಿಷನ್ ಆಸ್ಪತ್ರೆಯ ನರ್ಸ್ ಕೃಷ್ಣಮ್ಮ ಗೋಲ್ಡ್ ಸ್ಮಿತ್ ಬೆಜ್ಬರುವಾ ಹಾಗೂ ರೈಲ್ವೆ ಸಿಬ್ಬಂದಿಯ ಸಹಾಯದಿಂದ ಮಹಿಳೆ ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿದ್ದಾರೆ.
ತುರ್ತು ಪರಿಸ್ಥಿತಿಯಲ್ಲೂ ನರ್ಸ್ ತೋರಿದ ಧೈರ್ಯ ಮತ್ತು ವೃತ್ತಿಪರ ಸೇವೆಯಿಂದ ತಾಯಿ ಹಾಗೂ ಮಗುವಿನ ಜೀವ ರಕ್ಷಿಸಲಾಗಿದೆ. ರೈಲು ರಂಗಿಯಾ ನಿಲ್ದಾಣ ತಲುಪುತ್ತಿದ್ದಂತೆ ಅಲ್ಲೇ ಕಾಯುತ್ತಿದ್ದ ವೈದ್ಯಕೀಯ ತಂಡ ತಾಯಿ ಮತ್ತು ನವಜಾತ ಶಿಶುವನ್ನು ತಕ್ಷಣ ಪರೀಕ್ಷಿಸಿ ರಂಗಿಯಾ ರೈಲ್ವೆ ಆಸ್ಪತ್ರೆಗೆ ದಾಖಲಿಸಿತು. ಮಗು ಅಕಾಲಿಕವಾಗಿ ಜನಿಸಿದ್ದರಿಂದ ಹೆಚ್ಚಿನ ಚಿಕಿತ್ಸೆ ಮತ್ತು ನಿಗಾ ಅಗತ್ಯವಿರುವ ಹಿನ್ನೆಲೆಯಲ್ಲಿ ಇಬ್ಬರನ್ನೂ ರೈಲ್ವೆ ಆಂಬ್ಯುಲೆನ್ಸ್ ಮೂಲಕ ಗುವಾಹಟಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ತಾಯಿ ಮತ್ತು ಮಗು ಇಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈಶಾನ್ಯ ಗಡಿನಾಡು ರೈಲ್ವೆ ಘಟನೆಯ ವೇಳೆ ಕಾರ್ಯನಿರ್ವಹಿಸಿದ ಸಿಬ್ಬಂದಿಯನ್ನು ಅಭಿನಂದಿಸಿದ್ದು, ವಿಶೇಷವಾಗಿ ನರ್ಸ್ ಕೃಷ್ಣಮ್ಮ ಗೋಲ್ಡ್ ಸ್ಮಿತ್ ಬೆಜ್ಬರುವಾ ಅವರ ಸೇವೆಯನ್ನು ಶ್ಲಾಘಿಸಿದೆ. ಅನಿರೀಕ್ಷಿತ ತುರ್ತು ಸಂದರ್ಭಗಳಲ್ಲಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವ ವ್ಯವಸ್ಥೆಯ ಮಹತ್ವವನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.