ವಾಷಿಂಗ್ಟನ್, ಜೂ. 18 (DaijiworldNews/TA): ಸಾಮಾಜಿಕ ಜಾಲತಾಣಗಳ ದೈತ್ಯ ಸಂಸ್ಥೆ ಮೆಟಾ ತನ್ನ ಜನಪ್ರಿಯ ವೇದಿಕೆಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ವಾಟ್ಸಾಪ್ಗಾಗಿ ಹೊಸ ‘ಪ್ಲಸ್’ ಸಬ್ಸ್ಕ್ರಿಪ್ಷನ್ ಯೋಜನೆಗಳನ್ನು ಜಾಗತಿಕವಾಗಿ ಪರಿಚಯಿಸಿದೆ. ಈ ಕುರಿತು ಸಂಸ್ಥೆಯ ಪ್ರಾಡಕ್ಟ್ ವಿಭಾಗದ ಮುಖ್ಯಸ್ಥೆ ನವೋಮಿ ಗ್ಲೈಡ್ ಅಧಿಕೃತ ಘೋಷಣೆ ಮಾಡಿದ್ದಾರೆ.

ಹೊಸ ಯೋಜನೆಯಡಿ ಇನ್ಸ್ಟಾಗ್ರಾಮ್ ಪ್ಲಸ್ ಹಾಗೂ ಫೇಸ್ಬುಕ್ ಪ್ಲಸ್ ಚಂದಾದಾರಿಕೆಗೆ ತಿಂಗಳಿಗೆ 3.99 ಡಾಲರ್ (ಸುಮಾರು ರೂ. 377) ಮತ್ತು ವಾಟ್ಸಾಪ್ ಪ್ಲಸ್ಗೆ ತಿಂಗಳಿಗೆ 2.99 ಡಾಲರ್ (ಸುಮಾರು ರೂ.282) ಶುಲ್ಕ ನಿಗದಿಪಡಿಸಲಾಗಿದೆ. ಆದರೆ ಸಾಮಾನ್ಯ ಬಳಕೆದಾರರಿಗೆ ಲಭ್ಯವಿರುವ ಉಚಿತ ಸೇವೆಗಳು ಎಂದಿನಂತೆ ಮುಂದುವರಿಯಲಿವೆ ಎಂದು ಮೆಟಾ ಸ್ಪಷ್ಟಪಡಿಸಿದೆ.
ಮೆಟಾ ಸಂಸ್ಥೆಯು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ತನ್ನ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಹೊಸ ಆದಾಯ ಮೂಲಗಳ ಅನ್ವೇಷಣೆಗೆ ಮುಂದಾಗಿದೆ. ಇದುವರೆಗೆ ಕಂಪನಿಯ ಬಹುತೇಕ ಆದಾಯ ಜಾಹೀರಾತುಗಳಿಂದಲೇ ಬರುತ್ತಿದ್ದರೂ, ಇದೀಗ ಚಂದಾದಾರಿಕೆ ಮಾದರಿಯತ್ತ ಗಮನ ಹರಿಸಿದೆ ಎಂದು ವರದಿಗಳು ತಿಳಿಸಿವೆ.
ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಪ್ಲಸ್ ಬಳಕೆದಾರರಿಗೆ ಸ್ಟೋರಿ ರಿವಾಚ್ ಅಂಕಿಅಂಶಗಳು, ಸ್ಟೋರಿಗಳನ್ನು ರಹಸ್ಯವಾಗಿ ವೀಕ್ಷಿಸುವ ಅವಕಾಶ, 24 ಗಂಟೆಗೂ ಹೆಚ್ಚು ಸಮಯ ಸ್ಟೋರಿ ಉಳಿಸಿಕೊಳ್ಳುವ ಸೌಲಭ್ಯ ಹಾಗೂ ವಾರಕ್ಕೊಮ್ಮೆ ಸ್ಟೋರಿಯನ್ನು ಹೈಲೈಟ್ ಮಾಡುವಂತಹ ಹೆಚ್ಚುವರಿ ವೈಶಿಷ್ಟ್ಯಗಳು ಲಭ್ಯವಾಗಲಿವೆ. ವಾಟ್ಸಾಪ್ ಪ್ಲಸ್ನಲ್ಲಿ ಆ್ಯಪ್ ಐಕಾನ್ ಬದಲಾಯಿಸುವುದು, ಪ್ರೀಮಿಯಂ ಥೀಮ್ಗಳು, ಕಸ್ಟಮ್ ರಿಂಗ್ಟೋನ್ಗಳು, ಹೆಚ್ಚುವರಿ ಪಿನ್ ಚಾಟ್ಗಳು ಹಾಗೂ ವಿಶೇಷ ಸ್ಟಿಕ್ಕರ್ಗಳಂತಹ ಸೌಲಭ್ಯಗಳನ್ನು ನೀಡಲಾಗುತ್ತದೆ.
ಇದರ ಜೊತೆಗೆ, ಮುಂದಿನ ದಿನಗಳಲ್ಲಿ ಎಲ್ಲಾ ಚಂದಾದಾರಿಕೆ ಸೇವೆಗಳನ್ನು ‘ಮೆಟಾ ಒನ್’ ಎಂಬ ಒಂದೇ ಬ್ರ್ಯಾಂಡ್ ಅಡಿಯಲ್ಲಿ ತರಲು ಕಂಪನಿ ಯೋಜಿಸಿದೆ. ಅಲ್ಲದೆ, AI ಸೇವೆಗಳಿಗಾಗಿ ಪ್ರತ್ಯೇಕ ಪ್ರೀಮಿಯಂ ಯೋಜನೆಗಳನ್ನೂ ಪರೀಕ್ಷಿಸಲಾಗುತ್ತಿದ್ದು, ಅವುಗಳ ಮಾಸಿಕ ಶುಲ್ಕ 7.99 ಡಾಲರ್ನಿಂದ 19.99 ಡಾಲರ್ವರೆಗೆ ಇರಬಹುದು ಎಂದು ವರದಿಗಳು ತಿಳಿಸಿವೆ.