ಛತ್ತೀಸ್ಗಢ, ಜೂ. 18 (DaijiworldNews/TA): ಛತ್ತೀಸ್ಗಢದ ಕೊರಿಯಾ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ವಿವಾದ ರಕ್ತಸಿಕ್ತ ತಿರುವು ಪಡೆದುಕೊಂಡಿದ್ದು, ಬಿಜೆಪಿ ನಾಯಕ ಹಾಗೂ ಜನಪದ್ ಪಂಚಾಯತ್ ಮಾಜಿ ಅಧ್ಯಕ್ಷ ಭರತ್ ಸಿಂಗ್ ಅಲಿಯಾಸ್ ಲಲ್ಲಾ ಸಿಂಗ್ ಸೇರಿದಂತೆ ಮೂವರು ಭೀಕರ ಹತ್ಯೆಗೆ ಬಲಿಯಾಗಿದ್ದಾರೆ. ಫಾರ್ಚೂನರ್ ಎಸ್ಯುವಿಯನ್ನು ಟ್ರಕ್ಗಳ ನಡುವೆ ಸಿಲುಕಿಸಿ ಬೆಂಕಿ ಹಚ್ಚಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಆರೋಪಿಸಲಾಗಿದೆ.

ಮಂಗಳವಾರ ತಡರಾತ್ರಿ ಸೋನ್ಹತ್ ಪೊಲೀಸ್ ಠಾಣೆ ವ್ಯಾಪ್ತಿಯ ನೌಗೈನ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಘಟನೆಯ ನಂತರ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ, ಮರಳು ಕ್ವಾರಿ ಕಾರ್ಯಾಚರಣೆ ಮತ್ತು ಮರಳು ಸಾಗಣೆ ಮೇಲಿನ ನಿಯಂತ್ರಣಕ್ಕಾಗಿ ಭರತ್ ಸಿಂಗ್ ಬಣ ಹಾಗೂ ಬಿಜೆಪಿ ನಾಯಕ ಮನೋಜ್ ತ್ರಿಪಾಠಿ ಕುಟುಂಬದ ನಡುವೆ ಹಲವು ತಿಂಗಳುಗಳಿಂದ ವಿವಾದ ನಡೆಯುತ್ತಿತ್ತು.
ಸೋನ್ಹತ್, ಕೈಲಾಶ್ಪುರ, ತೆಲಿಮುಡಾ, ಬೆಲಿಯಾ ಮತ್ತು ಚಿಂಗುರಾ ಪ್ರದೇಶಗಳಲ್ಲಿನ ಮರಳು ಕ್ವಾರಿಗಳ ವ್ಯವಹಾರಕ್ಕೆ ಸಂಬಂಧಿಸಿದ ಹಣಕಾಸು ಮತ್ತು ನಿಯಂತ್ರಣ ವಿಚಾರದಲ್ಲಿ ಉಭಯ ಬಣಗಳ ನಡುವೆ ಸಂಘರ್ಷ ತೀವ್ರಗೊಂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಮಂಗಳವಾರ ರಾತ್ರಿ ವಿವಾದ ಬಗೆಹರಿಸುವ ಉದ್ದೇಶದಿಂದ ಭರತ್ ಸಿಂಗ್ ತಮ್ಮ ಸಹಚರರೊಂದಿಗೆ ಸ್ಥಳಕ್ಕೆ ತೆರಳಿದ್ದರು. ಇದೇ ವೇಳೆ ಅವರ ಫಾರ್ಚೂನರ್ ಕಾರನ್ನು ಟ್ರಕ್ಗಳ ಮೂಲಕ ಸುತ್ತುವರಿದು ತಪ್ಪಿಸಿಕೊಳ್ಳಲು ಅವಕಾಶವಿಲ್ಲದಂತೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ನಂತರ ವಾಹನದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದ್ದು, ಕಾರಿನೊಳಗಿದ್ದ ಭರತ್ ಸಿಂಗ್ ಸಜೀವ ದಹನಗೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಬಿಜೆಪಿ ನಾಯಕ ಭರತ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಸೋದರ ಸಂಬಂಧಿ ಹಾಗೂ ಶಿಕ್ಷಕರಾಗಿದ್ದ ನಾಗೇಂದ್ರ ಸಿಂಗ್ ಮತ್ತು ಗಾಯಗೊಂಡಿದ್ದ ವೀರೇಂದ್ರ ಸಿಂಗ್ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ.
ಮತ್ತೊಬ್ಬ ಗಾಯಾಳು ಮಯಾಂಕ್ ಸಿಂಗ್ ಅವರನ್ನು ಬಿಲಾಸ್ಪುರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಅಕ್ಷತ್ ತ್ರಿಪಾಠಿ, ವಿಶಾಲ್ ತ್ರಿಪಾಠಿ, ಸತ್ಯಪ್ರಕಾಶ್ ತ್ರಿಪಾಠಿ ಮತ್ತು ಮನ್ನು ತ್ರಿಪಾಠಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಒಟ್ಟು ಒಂಬತ್ತು ಮಂದಿಯ ವಿರುದ್ಧ ಕೊಲೆ, ಕೊಲೆಯತ್ನ ಹಾಗೂ ಇತರೆ ಗಂಭೀರ ಆರೋಪಗಳಡಿ ಪ್ರಕರಣ ದಾಖಲಾಗಿದೆ.
ಇದು ಪೂರ್ವನಿಯೋಜಿತ ಸಂಚು ಎಂದು ಆರೋಪಿಸಿರುವ ಭರತ್ ಸಿಂಗ್ ಕುಟುಂಬ, ಪ್ರಕರಣವನ್ನು ಸಿಬಿಐಗೆ ವಹಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಚೌಬೆ ಮಾತನಾಡಿ, ಮರಳು ಗಣಿಗಾರಿಕೆ ವಿವಾದವೇ ಘಟನೆಯ ಮೂಲ ಕಾರಣವಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಘಟನೆಯ ವೇಳೆ ಎರಡು ಬಣಗಳ ನಡುವೆ ಘರ್ಷಣೆ ಮತ್ತು ಹಲ್ಲೆ ನಡೆದಿದ್ದು, ಅದಾದ ಬಳಿಕ ಫಾರ್ಚೂನರ್ ಕಾರಿಗೆ ಬೆಂಕಿ ಹಚ್ಚಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದರು.
ಘಟನೆಗೆ ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಥಳೀಯ ಶಾಸಕ ಭಯ್ಯಾಲಾಲ್ ರಾಜ್ವಾಡೆ, ಕೊರಿಯಾ ಜಿಲ್ಲೆಯ ಇತಿಹಾಸದಲ್ಲೇ ಇಂತಹ ಭೀಕರ ಘಟನೆ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮಾಜಿ ಶಾಸಕ ಗುಲಾಬ್ ಕಾಮ್ರೋ ಕೂಡ ಘಟನೆ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಪ್ರತಿಕ್ರಿಯಿಸಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಬಂಧನಗಳು ನಡೆದಿದ್ದು, ತನಿಖೆ ಮುಂದುವರಿದಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಮುಂದೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.