ಬೆಂಗಳೂರು, ಜೂ. 18 (DaijiworldNews/AK): ಭಾರಿ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಕಾಂಗ್ರೆಸ್ನ ಐವರು ಮತ್ತು ಬಿಜೆಪಿಯ ಎರಡು ಅಭ್ಯರ್ಥಿಗಳು ಜಯಗಳಿಸಿದ್ದಾರೆ. . ಜೂನ್ 18, ಗುರುವಾರ ಮುಕ್ತಾಯಗೊಂಡ ಮತ ಎಣಿಕೆಯು ಬಿಜೆಪಿ-ಜೆಡಿ(ಎಸ್) ಮೈತ್ರಿಕೂಟಕ್ಕೆ ಗಮನಾರ್ಹ ಹಿನ್ನಡೆಯನ್ನುಂಟು ಮಾಡಿದೆ. ಜೆಡಿಎಸ್ನಿಂದ ಸ್ಪರ್ಧಿಸಿದ್ದ ಏಕೈಕ ಅಭ್ಯರ್ಥಿ ಸೋಲುಂಡಿದ್ದು, ಬಿಜೆಪಿ ಮತ್ತು ಜೆಡಿಎಸ್ನಿಂದ ಕ್ರಾಸ್ ವೋಟಿಂಗ್ ಆಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಬಿಕೆ ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು, ಪಿವಿ ಮೋಹನ್, ಶಿವಣ್ಣ ಬಿಎಸ್ (ಮಳವಳ್ಳಿ), ಮತ್ತು ವಿನಯ್ ಕಾರ್ತಿಕ್ ಪ್ರಕಾಶ್ ಯಶಸ್ವಿ ಕಾಂಗ್ರೆಸ್ ಅಭ್ಯರ್ಥಿಗಳು. ಬಿಜೆಪಿ ಪರ ಲಿಂಗರಾಜ್ ಪಾಟೀಲ್ ಮತ್ತು ರಘು ಆರ್ ಗೆ ಜಯ ಸಿಕ್ಕಿದೆ.
ಗೆದ್ದ ಅಭ್ಯರ್ಥಿಗಳ ಪಟ್ಟಿ
1 ಬಿ.ಕೆ. ಹರಿಪ್ರಸಾದ್ ಕಾಂಗ್ರೆಸ್
2 ತಿಪ್ಪಣ್ಣಪ್ಪ ಕಾಮಕನೂರ್ ಕಾಂಗ್ರೆಸ್
3 ಪಿ.ವಿ. ಮೋಹನ್ ಕಾಂಗ್ರೆಸ್
4 ಶಿವಣ್ಣ ಬಿ.ಎಸ್ (ಮಳವಳ್ಳಿ) ಕಾಂಗ್ರೆಸ್
5 ವಿನಯ್ ಕಾರ್ತಿಕ್ ಪ್ರಕಾಶ್ ಕಾಂಗ್ರೆಸ್
6 ಲಿಂಗರಾಜ್ ಪಾಟೀಲ್ ಬಿಜೆಪಿ
7 ರಘು ಆರ್ ಬಿಜೆಪಿ
ಅಡ್ಡ ಮತದಾನದಿಂದ ಜೆಡಿಎಸ್ಗೆ ಹಿನ್ನಡೆ
ನಿರ್ಣಾಯಕ ಏಳನೇ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಯಶಸ್ವಿಯಾಗಿ ಹಿಂದಿಕ್ಕಿದ್ದರಿಂದ ರಾಜಕೀಯ ನಾಟಕ ನಡೆಯಿತು. ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಗೆ 11 ಹೆಚ್ಚುವರಿ ಮತಗಳು ದೊರೆತಿವೆ. ಶಿವರಾಂ ಹೆಬ್ಬಾರ್, ಎಸ್.ಟಿ.ಸೋಮಶೇಖರ್ ಹೊರತುಪಡಿಸಿ ಬಿಜೆಪಿಯ 3 ಮತ್ತು ಜೆಡಿಎಸ್ನ 6 ಶಾಸಕರಿಂದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾವಣೆಗೊಂಡಿದೆ. ಹೀಗಾಗಿ ಲಿಂಗರಾಜ ಪಾಟೀಲ್ ಗೆಲುವಿನ ಕೋಟಾ ತಲುಪಿರಲಿಲ್ಲ. ಪ್ರತಿ ಅಭ್ಯರ್ಥಿ ಗೆಲ್ಲಲು 27.63 ಮತ ಪಡೆಯಬೇಕು. ಆದರೆ ಲಿಂಗರಾಜ ಪಾಟೀಲ್ಗೆ ಕೇವಲ 27 ಮತಗಳು ಸಿಕ್ಕಿದ್ದವು. ಜೆಡಿಎಸ್ನ ಗೋವಿಂದರಾಜು 14 ಮತ ಪಡೆದಿದ್ದ ಹಿನ್ನೆಲೆ ಎಲಿಮಿನೇಷನ್ ರೌಂಡ್ನಲ್ಲಿ ಲಿಂಗರಾಜ್ ಪಾಟೀಲ್ಗೆ ಜಯ ಸಿಕ್ಕಿದೆ. ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಚಲಾವಣೆಗೊಂಡಿದ್ದ 222 ಮತಗಳ ಪೈಕಿ ಒಂದು ಮತ ಅಸಿಂಧುವಾಗಿದೆ. ನಂಬರ್ ಸರಿಯಾಗಿ ಬರೆಯದಿದ್ದಕ್ಕೆ 1 ಮತವನ್ನು ತಿರಸ್ಕರಿಸಲಾಗಿದೆ.